Advertisement

ಕಾಮಗಾರಿ ಇಲ್ಲ; ಪೇಂಟಿಂಗ್‌ ಮಾತ್ರ; ಮೊರ್ಬಿ ಸೇತುವೆಯ ಕಾಮಗಾರಿ ರಹಸ್ಯ ಬಯಲು

08:32 PM Nov 02, 2022 | Team Udayavani |

ಮೊರ್ಬಿ: 141 ಮಂದಿಯ ಸಾವಿಗೆ ಕಾರಣವಾದ ಗುಜರಾತ್‌ನ ಮೊರ್ಬಿ ಸೇತುವೆ ದುರಂತದ ಕುರಿತು ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದು, ಸೇತುವೆ ನಿರ್ವಹಣೆಯಲ್ಲಿ ಗಂಭೀರ ಲೋಪ ಬಯಲಾಗಿದೆ.

Advertisement

ನ್ಯಾಯಾಲಯಕ್ಕೆ ಈ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. 143 ವರ್ಷ ಹಳೆಯ ಕೇಬಲ್‌ ಬ್ರಿಡ್ಜ್ ಅನ್ನು ನವೀಕರಣಗೊಳಿಸುವ ಮೊದಲು ಮತ್ತು ನಂತರ ಅದರ ಬಾಳುವಿಕೆಯ ಬಗ್ಗೆ ಅಧ್ಯಯನ ನಡೆಸಲಾಗಿಲ್ಲ. ತುಂಡಾದ ಕೇಬಲ್‌ ಸೇರಿದಂತೆ ಸೇತುವೆಯ ಅನೇಕ ಕೇಬಲ್‌ಗ‌ಳು ತುಕ್ಕು ಹಿಡಿದಿವೆ. ನವೀಕರಣ ಸಂದರ್ಭದಲ್ಲಿ ಕೇಬಲ್‌ಗ‌ಳ ದುರಸ್ತಿಯೇ ಮಾಡಿಲ್ಲ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಕೇವಲ ಪಾಲಿಶ್‌:
ಸೇತುವೆಯ ನವೀಕರಣ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಅಂತಹ ಕೆಲಸಕ್ಕೆ ಅರ್ಹರಲ್ಲ. ಉಪಗುತ್ತಿಗೆದಾರ ಕೇವಲ ಕೇಬಲ್‌ಗ‌ಳಿಗೆ ಪೇಂಟಿಂಗ್‌ ಮಾಡಿ, ಪಾಲಿಶ್‌ ಮಾಡಿದ್ದಾನೆ. 2007ರಲ್ಲಿ ಒರೇವಾ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಅನರ್ಹವಾಗಿದ್ದರೂ ಈಗ ಪುನಃ ಅದೇ ಕಂಪನಿಗೆ ಗುತ್ತಿಗೆ ನೀಡಲಾಗಿದೆ.
54 ಮಕ್ಕಳು ಸಾವು: ದುರಂತದಲ್ಲಿ 54 ಮಕ್ಕಳೇ ಇದ್ದಾರೆ. ಇದರಲ್ಲಿ 38 ಬಾಲಕರು ಮತ್ತು 16 ಬಾಲಕಿಯರು ಸೇರಿದ್ದಾರೆ ಎಂಬ ವಿಚಾರವೂ ಬಯಲಾಗಿದೆ. ಇದೇ ವೇಳೆ, 1979ರಲ್ಲಿ ಮಚ್ಚು ನದಿಗೆ ಅಡ್ಡಲಾಗಿ ಕಟ್ಟಿದ್ದ ಅಣೆಕಟ್ಟೆ ಒಡೆದು ಉಂಟಾಗಿದ್ದ ದುರಂತದಲ್ಲಿ ಪಾರಾಗಿದ್ದ ಮಹಿಳೆ ಕೇಬಲ್‌ ಬ್ರಿಡ್ಜ್ ಕುಸಿತದಲ್ಲಿ ಅಸುನೀಗಿದ್ದಾರೆ.

ದೈವೇಚ್ಛೆ:
ನ್ಯಾಯಾಲಯದ ವಿಚಾರಣೆ ವೇಳೆ ಒರೇವಾ ಕಂಪನಿಯ ವ್ಯವಸ್ಥಾಪಕ ದೀಪಕ್‌ ಪರೇಖ್‌, “ಮೊರ್ಬಿಯಲ್ಲಿ ದುರದೃಷ್ಟಕರ ಘಟನೆ ನಡೆದಿದೆ. ಸೇತುವೆ ಕುಸಿತ ದೈವೇಚ್ಛೆ,’ ಎಂದು ಬಾಲಿಶದ ಉತ್ತರ ನೀಡಿದ್ದಾರೆ. ಜತೆಗೆ ಮೊರ್ಬಿ ಬಾರ್‌ ಎಸೋಸಿಯೇಷನ್‌ ಬಂಧಿತರ ಪರವಾಗಿ ವಕಾಲತ್ತು ವಹಿಸದೇ ಇರಲೂ ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next