Advertisement

ರಾಜ್ಯದಲ್ಲಿ ಗಲಭೆ ಸೃಷ್ಟಿಸುವ ಷಡ್ಯಂತ್ರ

04:48 PM Apr 21, 2022 | Niyatha Bhat |

 ಶಿವಮೊಗ್ಗ: ಶಾಂತಿಯಲ್ಲಿದ್ದ ರಾಜ್ಯದಲ್ಲಿ ಕೊಲೆ, ದೊಂಬಿ ಮೂಲಕ ಗಲಭೆ ನಿರ್ಮಾಣದ ಷಡ್ಯಂತ್ರ ನಡೆಯುತ್ತಿದೆ. ಇದು ಖಂಡನೀಯ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

Advertisement

ಶಿವಮೊಗ್ಗದ ‌ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಒಬ್ಬ ಮೌಲ್ವಿ ಪೊಲೀಸ್‌ ಜೀಪ್‌ ಮೇಲೆ ನಿಂತು ತಲೆಗಳನ್ನು ಕತ್ತರಿಸಿ, ರುಂಡಗಳನ್ನು ಬೇರೆ ಮಾಡಿ ಎಂದು ಪ್ರಚೋದನಾಕರಿ ಮಾತು ಆಡುತ್ತಾನೆ. ಕಾಂಗ್ರೆಸ್‌ ನಗರ ಅಧ್ಯಕ್ಷ ಅಲ್ತಾಫ್‌ ಹಳ್ಳೂರ್‌ ಮೌಲ್ವಿ ಪಕ್ಕದಲ್ಲಿ ನಿಂತು ಕಲ್ಲು ಹೊಡೆಯುವುದನ್ನು ನೋಡುತ್ತಿದ್ದಾರೆ. ಆಸ್ಪತ್ರೆ, ದೇವಾಲಯ, ಪೊಲೀಸ್‌ ತಲೆಗಳನ್ನು ಹುಡುಕಿ ಕಲ್ಲು ಹೊಡೆಯುತ್ತಾರೆ. ಈ ರೀತಿಯ ಕಲ್ಲು ತೂರಾಟ ಮಾಡುವ ಪುಂಡರಿಗೆ ತಕ್ಕ ಶಿಕ್ಷೆಯಾಗಬೇಕು. ಇದನ್ನು ನೇರವಾಗಿ ಎದುರಿಸುವ ಶಕ್ತಿ ಹಿಂದೂ ಸಂಘಟನೆಗಳಿಗಿದೆ. ಆದರೆ ನಾವು ಕಾನೂನು ಕೈಗೆ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಲಿದೆ. ಪ್ರಚೋದನೆ ನಂತರ ಮೌಲ್ವಿ ಹೇಡಿಯ ರೀತಿ ಓಡಿ ಹೋಗಿದ್ದಾನೆ. ಗೂಂಡಾಗಿರಿಗೆ ಪ್ರಚೋದನೆ ಕೊಟ್ಟು ಓಡಿಹೋದ ರಾಷ್ಟ್ರದ್ರೋಹಿ ಮೌಲ್ವಿ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು. ಕೆಜಿ ಹಳ್ಳಿ, ಡಿಜಿ ಹಳ್ಳಿ, ಹರ್ಷ, ಚಂದ್ರು ಕೊಲೆಯಾಯಿತು. ಇದೀಗ ಹುಬ್ಬಳಿ ಘಟನೆ. ಈ ರೀತಿ ಕೊಲೆ, ದೊಂಬಿ ಮಾಡುವ ವ್ಯಕ್ತಿಗಳನ್ನು ಬಿಡಬಾರದು. ಸಿಸಿ ಟಿವಿ ಆಧರಿಸಿ, ಈಗಾಗಲೇ ಬಂಧನ ಮಾಡಲಾಗುತ್ತಿದೆ. ಗೂಂಡಾ ಕಾಯ್ದೆಅಡಿ ಅವರನ್ನು ಬಂಧನ ಮಾಡಿ, ಗಡಿಪಾರು ಮಾಡಬೇಕು. ಕೊಲೆ, ದೊಂಬಿ ಮಾಡುವುದು, ಬೇಲ್‌ ಪಡೆದು ವಾಪಸ್‌ ಬರೋದು ಅವರಿಗೆ ಅಭ್ಯಾಸ ಅಗಿದೆ. ಘಟನೆಗಳಿಗೆ ಕಾರಣರಾದ ವ್ಯಕ್ತಿ, ಸಂಘಟನೆ, ಪಕ್ಷದ ಬಗ್ಗೆ ಗಮನ ಹರಿಸಬೇಕು. ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಆಯ್ತು. ಇನ್ನೆಲ್ಲಿ ಗಲಭೆ ಮಾಡುತ್ತಾರೋ ಗೊತ್ತಾಗಲ್ಲ, ಸರಕಾರ ಈ ಬಗ್ಗೆ ಗಮನ ಹರಿಸಬೇಕು ಎಂದರು.

ಇಷ್ಟೆಲ್ಲಾ ಘಟನೆ ನಡೆದರೂ ಕಾಂಗ್ರೆಸ್‌ ಖಂಡಿಸುವ ಕೆಲಸ ಮಾಡಿಲ್ಲ. ಕಲ್ಲಂಗಡಿ ಒಡೆದಾಗ ಎಲ್ಲರೂ ಬೊಬ್ಬೆ ಹಾಕಿದರು. ಪೊಲೀಸರ ತಲೆ ಒಡೆದರೂ ಇಂದು ಮಾತನಾಡುತ್ತಿಲ್ಲ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌, ಕುಮಾರಸ್ವಾಮಿ ಮಾತನಾಡುತ್ತಿಲ್ಲ. ಎಲ್ಲಾ ಮುಸಲ್ಮಾನರು ರಾಷ್ಟ್ರದ್ರೋಹಿಗಳು ಎಂದು ನಾನು ಹೇಳಲ್ಲ. ಇಂತಹ ಕೃತ್ಯದಲ್ಲಿ ಭಾಗಿಯಾಗುವವರು ಖಂಡಿತವಾಗಿಯೂ ರಾಷ್ಟ್ರದ್ರೋಹಿಗಳು. ಅಧಿಕಾರದ ಆಸೆಗಾಗಿ ಕಾಂಗ್ರೆಸ್‌ ಮುಸಲ್ಮಾನರ ಓಲೈಕೆ ಮಾಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌, ಜೆಡಿಎಸ್‌ ಅಧಿಕಾರದ ದಾಹಕ್ಕೆ ಕೊಲೆ, ದೊಂಬಿಗಳಾಗುತ್ತಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಸಿಎಂ ಬೊಮ್ಮಾಯಿ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಹರತಾಳು ಹಾಲಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್‌, ಮೇಯರ್‌ ಸುನೀತಾ ಅಣ್ಣಪ್ಪ, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್‌.ಎನ್‌. ಚನ್ನಬಸಪ್ಪ ಇದ್ದರು.

Advertisement

ಕ‌ಮಿಷನ್‌ ದಾಖಲೆ ಕೊಡಿ

ದಿಂಗಾಲೇಶ್ವರ ಸ್ವಾಮೀಜಿ ನನ್ನ ಪರ ಮಾತಾಡಿದ್ದಕ್ಕೆ ನಾನು ಆಭಾರಿ. ಆದರೆ ಕಮಿಷನ್‌ ವಿಚಾರವಾಗಿ ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸುವ ಬದಲಿಗೆ ದಾಖಲೆಗಳನ್ನು ನೀಡಲಿ. ಬಾಯಿಗೆ ಬಂದಂತೆ ಮಾತನಾಡುವುದು ಬಿಡಬೇಕು. ಯಾವುದೇ ಇಲಾಖೆಗೆ ಕಮಿಷನ್‌ ಕೊಟ್ಟಿದ್ದರೆ ದಾಖಲೆ ನೀಡಲಿ ಎಂದರು. ಕಾಂಗ್ರೆಸ್‌ ಬೆಳಗ್ಗೆ ಎದ್ದರೆ ಮುಸ್ಲಿಮರನ್ನು ಮೆಚ್ಚಿಸುವ ಕೆಲಸ ಮಾಡುತ್ತಿದೆ. ಇವರಿಗೆ ಕಮಿಷನ್‌ ಬಗ್ಗೆ ಮಾತನಾಡುವುದೇ ಕೆಲಸವಾಗಿಬಿಟ್ಟಿದೆ. ಮುಂದಿನ ದಿನದಲ್ಲಿ ಕಾಂಗ್ರೆಸ್‌ ವಿಪಕ್ಷ ಸ್ಥಾನದಲ್ಲೂ ಇರಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ. ವೀರಶೈವ ಲಿಂಗಾಯತರನ್ನು ಒಡೆಯುವ ಕೆಲಸ ಮಾಡಿದರು. ಹೀಗಾಗಿ ರಾಜ್ಯದ ಜನ ಅವರಿಗೆ ಅಧಿಕಾರ ಕೊಡಲಿಲ್ಲ. ಕಾಂಗ್ರೆಸ್‌ ಈಗಲಾದರೂ ಜನಪರ ಕೆಲಸ ಮಾಡಲಿ ಎಂದರು.

ಕೆಂಪಣ್ಣ ವಿರುದ್ದ ಆಕ್ರೋಶ

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್‌ ಏಜೆಂಟ್‌ ರಂತೆ ಕೆಲಸ ಮಾಡುತ್ತಿದ್ದಾರೆ. ಕಮಿಷನ್‌ ಪಡೆದಿರುವುದಕ್ಕೆ ಯಾರೂ ರಶೀದಿ ಕೊಡಲ್ಲ. ಆದರೆ ಯಾರಿಗೆ ಕಮಿಷನ್‌ ಕೊಟ್ಟಿದ್ದಾರೆಂದು ಇವರು ಬಹಿರಂಗಪಡಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next