ಬೆಂಗಳೂರು: ಚುನಾವಣಾ ಅಕ್ರಮಗಳ ಮೇಲೆ ಕಣ್ಣಿಟ್ಟಿರುವ ಚುನಾವಣಾ ಆಯೋಗ ಮತ್ತು ಪೊಲೀಸರು ನಗರದಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದು, ಕತ್ರಿಗುಪ್ಪೆಯ ವಾಟರ್ ಟ್ಯಾಂಕ್ ಬಳಿ ಐಶಾರಾಮಿ ಕಾರಿನಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 10 ಲಕ್ಷ ರೂ. ಗಳನ್ನು ಸ್ಥಿರ ತಪಾಸಣಾ ದಳ (ಎಸ್‌ಎಸ್‌ಟಿ) ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಇನ್ನೊಂದೆಡೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆಯಿಲ್ಲದೆ ಅಕ್ರಮವಾಗಿ 4 ಲಕ್ಷ ರೂ. ಮೌಲ್ಯದ ಸೀರೆ ಹಾಗೂ 4.92 ಲಕ್ಷ ನಗದನ್ನು ಚುನಾವಣಾ ವಿಚಕ್ಷಣಾ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.
ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಹಾಗೂ ಚುನಾವಣಾಧಿಕಾರಿಗಳನ್ನು ಒಳಗೊಂಡ ಎಸ್‌ಎಸ್‌ಟಿ ತಂಡ ಮಂಗಳವಾರ ವೇಳೆ ಕತ್ರಿಗುಪ್ಪೆ ವಾಟರ್ ಟ್ಯಾಂಕ್ ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿತ್ತು. ಸಂಜೆ 5 ಗಂಟೆ ಸುಮಾರಿಗೆ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಬೆಂಝ್ ಕಾರು ಈ ಮಾರ್ಗದಲ್ಲಿ ಬಂದಾಗ ಸಿಬ್ಬಂದಿ ಕಾರು ನಿಲ್ಲಿಸಿ ತಪಾಸಣೆ ನಡೆಸಿದರು. ಈ ವೇಳೆ ಕಾರಿನಲ್ಲಿ 10 ಲಕ್ಷ ರೂ. ಪತ್ತೆಯಾಗಿದೆ. ಹಣದ ಕುರಿತು ಕಾರಿನಲ್ಲಿದ್ದ ಉದ್ಯಮಿ ಡೈಂಜಿನ್ ಎಂಬುವರನ್ನು ಪ್ರಶ್ನಿಸಿದಾಗ, ಇದು ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಹಣವಾಗಿದ್ದು, ತಮಗೆ ಸೇರಿದ್ದು ಎಂದು ಹೇಳಿದ್ದಾರೆ. ಆದರೆ, ಈ ಕುರಿತು ದಾಖಲೆಗಳು ಅವರ ಬಳಿ ಇರಲಿಲ್ಲ.
ಈ ಹಿನ್ನೆಲೆಯಲ್ಲಿ ಹಣ ಜಪ್ತಿ ಮಾಡಿರುವ ಎಸ್‌ಎಸ್‌ಟಿ ಸಿಬ್ಬಂದಿ ಕಾರಿನಲ್ಲಿ ಪತ್ತೆಯಾದ ಈ ಹಣದ ಕುರಿತು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
164 ಸೀರೆಗಳ ಜಪ್ತಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಸುಣಕಲ್ ಪೇಟೆ ಜಂಕ್ಷನ್‌ನಲ್ಲಿ ಕಾರೊಂದರ ಲ್ಲಿದ್ದ 168 ಸೀರೆಗಳು ಪತ್ತೆಯಾಗಿವೆ. ಕಾರು ಚಾಲಕ ಅಬ್ದಲ್ಲಾ ಎಂಬಾತನನ್ನು ದಾಖಲೆ ಕೇಳಿದಾಗ ತಬ್ಬಿಬ್ಟಾಗಿದ್ದಾನೆ. ಹೀಗಾಗಿ ಕಾರು, ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸೀರೆಗಳ ಮೌಲ್ಯ 4 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.