ಕಲಬುರಗಿ: ರೌಡಿಶೀಟರ್‌ಗಳು ಮತ್ತು ಈಗ ತಾನೆ ತಲೆ ಎತ್ತಿ ರೌಡಿಗಳು ಎನ್ನಿಸಿಕೊಳ್ಳಲು ಹವಣಿಸುತ್ತಿರುವ ಮರಿ ರೌಡಿಗಳು ಸಮಾಜದಲ್ಲಿ ಅಪರಾಧಿಕ ಚಟುವಟಿಕೆ ನಡೆಸಲು ಮುಂದಾದರೆ, ಬಾಲ ಬಿಚ್ಚಿದರೆ ಹುಷಾರ್, ಬಾಲ ಕಟ್ ಮಾಡಬೇಕಾಗುತ್ತದೆ ಎಂದು ಉತ್ತರ ವಿಭಾಗದ ಎಸಿಪಿ ದೀಪನ್ ಎಂ.ಎನ್ ಎಚ್ಚರಿಕೆ ನೀಡಿದ್ದಾರೆ.
ನಗರದ ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿ ಗುರುವಾರ ರೌಡಿಗಳ ಪರೇಡ್ ನಡೆಸಿದ ಅವರು, ಬಹುತೇಕ ರೌಡಿಗಳ ದಿನಚರಿ ಪ್ರಶ್ನಿಸಿದರು. ಅಲ್ಲದೇ, ಅಕ್ರಾಳ, ವಿಕ್ರಾಳ ಕಾಣಿಸುತ್ತಿದ್ದ ಎಲ್ಲರಿಗೂ ನೆಟ್ಟಗೆ ಶೇವ್ ಮಾಡಿಕೊಂಡು ಜನಸಾಮಾನ್ಯರಂತೆ ಇರಿ ಎಂದು ಎಚ್ಚರಿಸಿದರು.
ಉತ್ತರ ನಗರ ಠಾಣೆ ವ್ಯಾಪ್ತಿಯಲ್ಲಿ ಯಾವುದೇ ಅಪರಾಧ ಚಟುವಟಿಕೆಯಲ್ಲಿ ತೊಡಗದಂತೆ ಮತ್ತು ಬಡ್ಡಿ ವ್ಯವಹಾರ, ಲ್ಯಾಂಡ್ ಮಾಫಿಯಾ, ಹಪ್ತಾ ವಸೂಲಿ ಮಾಡೋದನ್ನು ನಿಲ್ಲಿಸಿ. ಇಲ್ಲದಿದ್ದರೆ ನಮ್ಮ ಕೈಗೆ ಸಿಕ್ಕಿ ಬಿದ್ದರೆ ಗಡಿಪಾರು ನಿಶ್ಚಿತ ಎಂದು ಎಚ್ಚರಿಸಿದರು.
ಪರೇಡ್‌ನಲ್ಲಿ ಠಾಣೆ ವ್ಯಾಪ್ತಿಯ 175 ಜನ ರೌಡಿಶೀಟರ್‌ಗಳ ಪೈಕಿ 89 ಜನ ಭಾಗವಹಿಸಿದ್ದರು. ಪರೇಡ್ ಗೆ ಗೈರು ಹಾಜರಾದ ರೌಡಿಶೀಟರ್ ಗಳ ಮೇಲೆ ನಿಗಾ ಇರಿಸಲಾಗಿದ್ದು, ಅವರು ಪ್ರತಿ ತಿಂಗಳು ರೌಡಿ ಪರೇಡ್‌ಗೆ ಹಾಜರಾಗಬೇಕು ಎಂದು ಸೂಚಿಸಿದರು. ಇತರೆ ಅಧಿಕಾರಿಗಳು ಇದ್ದರು.