ಬೆಂಗಳೂರು: ಮುಖ್ಯರಸ್ತೆಯಲ್ಲಿದ್ದ ಜಾಹೀರಾತು ಫಲಕಗಳಿಗೆ ಅಡ್ಡಿಯಾಗುತ್ತವೆ ಎಂಬ ಕಾರಣಕ್ಕೆ 17 ಮರಗಳಿಗೆ ಆ್ಯಸಿಡ್ ಹಾಕಲಾಗಿದ್ದ ಪ್ರಕರಣದಲ್ಲಿ ಮೂರು ಮರಗಳನ್ನು ಬದುಕಿಸಿಕೊಳ್ಳುವಲ್ಲಿ ವೃಕ್ಷ ತಜ್ಞ ವಿಜಯ್ ನಿಶಾಂತ್ ತಂಡ ಸಫಲವಾಗಿದೆ.
ದೊಡ್ಡನೆಕ್ಕುಂದಿ ವಾರ್ಡ್‌ನ ಚಿನ್ನಪ್ಪನಹಳ್ಳಿ ಬಳಿಯ ಕಲಾಮಂದಿರ್ ಸರ್ವಿಸ್ ರಸ್ತೆಯ ಬದಿಯಲ್ಲಿರುವ ಜಾಹೀರಾತು ಫಲಕ ರಸ್ತೆಗೆ ಸಮರ್ಪಕವಾಗಿ ಕಾಣುವುದಿಲ್ಲ ಎಂದು ಕಿಡಿಗೇಡಿಗಳು ಮರಗಳಿಗೆ ಭಾರಿ ಪ್ರಮಾಣದಲ್ಲಿ ಆ್ಯಸಿಡ್ ಹಾಕಿದ್ದರು. ಪರಿಣಾಮ ಮರಗಳು ದಿನೇ ದಿನೆ ಒಣಗಲಾರಂಭಿಸಿದ್ದವು. ಪ್ರಕರಣ ಬೆಳಕಿಗೆ ಬಂದ ಕೂಡಲೇ ನಿಶಾಂತ್ ಅವರ ತಂಡ ಮರಗಳಿಗೆ ಚಿಕಿತ್ಸೆ ಆರಂಭಿಸಿತ್ತು.
ಮರಗಳು° ಉಳಿಸಲು ನಿರಂತರವಾಗಿ ಪ್ರಯತ್ನ ನಡೆಸಲಾಯಿತಾದರೂ 17 ಮರಗಳ ಪೈಕಿ 14 ಮರಗಳನ್ನು ಉಳಿಸಲಾಗಿಲ್ಲ. ಮೂರು ಮರಗಳು ಚಿಕಿತ್ಸೆ ಸ್ಪಂದಿಸುತ್ತಿದ್ದ ಹಿನ್ನೆಲೆಯಲ್ಲಿ ನಿರಂತರವಾಗಿ ಮರಗಳಿಗೆ ಚಿಕಿತ್ಸೆ ನೀಡಿದರಿಂದ ಬದುಕುಳಿದಿದ್ದು, ಮರಗಳಲ್ಲಿ ಮತ್ತೆ ಚಿಗುರು ಕಾಣಿಸಿಕೊಂಡಿದೆ.
ಮರಗಳಿಗೆ ಚಿಕಿತ್ಸೆ ಆರಂಭಿಸಿದ ನಿಶಾಂತ್ ತಂಡ, ಆ್ಯಸಿಡ್ ಹಾಕಲಾಗಿದ್ದ ಭಾಗದಲ್ಲಿದ್ದ ಪದರ ತೆಗೆದು ಮರಗಳಿಗೆ ಚಿಕಿತ್ಸೆ ನೀಡಿದ್ದರು. ಇದರೊಂದಿಗೆ 2ಧಿ-3 ದಿನಗಳಿಗೆ ಒಮ್ಮೆ ಮರಗಳ ಆರೋಗ್ಯ ಪರಿಶೀಲಿಸಿ, ಮರಗಳಿಗೆ ನೀರು ಹಾಕುತ್ತಿದ್ದರು. ನಿರಂತರ ಚಿಕಿತ್ಸೆ ಫಲವಾಗಿ ಮರಗಳು ಮರು ಜೀವ ಪಡೆದುಕೊಂಡಿವೆ.
ಪ್ರಕರಣ ಏನು?: ದೊಡ್ಡನೆಕ್ಕುಂದಿ ವಾರ್ಡ್‌ನ ಚಿನ್ನಪ್ಪನಹಳ್ಳಿ ಬಳಿಯ ಕಲಾಮಂದಿರ್ ಸರ್ವಿಸ್ ರಸ್ತೆ ಬದಿಯಲ್ಲಿರುವ ಜಾಹೀರಾತು ಫಲಕಕ್ಕೆ ಮರಗಳು ಅಡ್ಡಿಯಾಗಿವೆ ಎಂಬ ಕಾರಣಕ್ಕೆ ಕೆಲವರು, 17 ಮರಗಳ ಬುಡಕ್ಕೆ ಭಾರಿ ಪ್ರಮಾಣದಲ್ಲಿ ಆ್ಯಸಿಡ್ ಹಾಕಿದ್ದರು. ಇದರೊಂದಿಗೆ 13ಕ್ಕೂ ಹೆಚ್ಚು ಮರಗಳನ್ನು ಬುಡವರೆಗೆ ಕತ್ತರಿಸಿದ್ದರು. ಏಜೆನ್ಸಿ ವಿರುದ್ಧ ಈಗಾಗಲೇ ಸ್ಥಳೀಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ನಿತ್ಯ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ವೃಕ್ಷ ತಜ್ಞ ವಿಜಯ್ ನಿಶಾಂತ್ ಅವರು ದಿನೇ ದಿನೆ ಮರಗಳು ಒಣಗುತ್ತಿರುವುದನ್ನು ಗಮನಿಸಿ ಪರಿಶೀಲಿಸಿದಾಗ ಅವುಗಳಿಗೆ ಆ್ಯಸಿಡ್ ಹಾಕಿರುವುದು ಬೆಳಕಿಗೆ ಬಂದಿತ್ತು. ಕೂಡಲೇ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿ, ಆ್ಯಸಿಡ್ ಹಾಕಲಾಗಿದ್ದ ಮರಗಳಿಗೆ ಚಿಕಿತ್ಸೆ ಆರಂಭಿಸಿದ್ದರು.
ಏ.26ರಂದು ವಿಚಾರಣೆ
ಮರಗಳಿಗೆ ಆ್ಯಸಿಡ್ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾರ್ಯಕರ್ತ ಸಾಯಿದತ್ತ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಏ.26ರಂದು ವಿಚಾರಣೆಗೆ ಬಿಡಿಎ, ಬಿಬಿಎಂಪಿ ಹಾಗೂ ಪೊಲೀಸ್ ಆಯುಕ್ತರು, ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಖುದ್ದು ಹಾಜರಾಗುವಂತೆ ಲೋಕಾಯುಕ್ತ ಸೂಚನೆ ನೀಡಿದೆ.