Advertisement

ರೈತ ಸಾಧಕ

09:58 AM Jan 03, 2020 | mahesh |

“ನೋಡುತ್ತಿರು, ಒಂದಲ್ಲಾ ಒಂದು ದಿನ ನಾನು ಮಹಾರಾಜರಿಂದ ಸನ್ಮಾನಿತನಾಗುತ್ತೇನೆ. ನೀನೋ ಅನಕ್ಷರಸ್ಥ ರೈತ. ಇದೆಲ್ಲಾ ನಿನಗೆ ಅರ್ಥವಾಗದು’ ಎಂದು ತಂದೆಯನ್ನೇ ಹೀಗಳೆಯುತ್ತಿದ್ದ ಕಮಲಾಕರನಿಗೆ ಕಡೆಗೂ ಬುದ್ಧಿ ಬಂತು.

Advertisement

ಕಮಲಾಪುರ ಎಂಬ ಊರಿನಲ್ಲಿ ರಾಮಯ್ಯ ಎಂಬ ರೈತನಿದ್ದನು. ಅವನು ಪೂರ್ವಿಕರಿಂದ ಬಂದ ಜಮೀನಿನಲ್ಲಿ ಉತ್ತಿ ಬಿತ್ತಿ ಬೆಳೆ ಬೆಳೆದು ಸುಖವಾಗಿ ಜೀವನ ಸಾಗಿಸುತ್ತಿದ್ದನು. ಅವನು ಯಾವುದೇ ಆಮಿಷಕ್ಕೆ ಅತಿಯಾಸೆಗೆ ಒಳಗಾಗದೇ ಕಷ್ಟಪಟ್ಟು ದುಡಿಯುತ್ತಿದ್ದನು. ಅವನ ಶತ್ರುಗಳು ಅವನ ಕುರಿತಾಗಿ ಆಸೆಬುರುಕ, ಲೋಭಿ ಎಂದೆಲ್ಲಾ ಅಪಪ್ರಚಾರ ಮಾಡುತ್ತಿದ್ದರು. ರಾಮಯ್ಯ ಮಾತ್ರ ಯಾರ ಮಾತಿಗೂ ಕಿವಿಗೊಡದೆ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ಹೋಗುತ್ತಿದ್ದನು.

ರಾಮಯ್ಯನಿಗೆ ಒಬ್ಬ ಮಗನಿದ್ದ. ಅವನ ಹೆಸರು ಕಮಲಾಕರ. ಕಮಲಾಕರನಲ್ಲಿ ಅಪ್ಪನ ಸದ್ಗುಣಗಳಾವುವೂ ಇರಲಿಲ್ಲ. ಅವನಿಗೆ ತಾನೊಬ್ಬ ದೊಡ್ಡ ವಿದ್ವಾಂಸನಾಗಿ ಮಹಾರಾಜರಿಂದ ಸನ್ಮಾನಿತನಾಗಬೇಕು ಎಂಬ ಬಯಕೆಯಿತ್ತು. ಆದರೆ ಅವನ ಬಳಿ ಸನ್ಮಾನಕ್ಕೆ ತಕ್ಕುದಾದ ಪಾಂಡಿತ್ಯ ಇರಲಿಲ್ಲ. ಆದರೂ, ಊರಿನ ವಿದ್ವಾಂಸರೊಡನೆ ವಾದ ವಿವಾದಗಳಲ್ಲಿ ತೊಡಗಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡು ಬರುತ್ತಿದ್ದನು. ಅಲ್ಲದೆ ಹಣಕ್ಕಾಗಿ ತಂದೆಯನ್ನು ದಿನವೂ ಪೀಡಿಸುತ್ತಿದ್ದನು. ರಾಮಯ್ಯ ಬುದ್ಧಿವಾದ ಹೇಳಿದರೆ “ನೋಡುತ್ತಿರು, ನಾನು ಒಂದಲ್ಲಾ ಒಂದು ದಿನ ಮಹಾರಾಜರಿಂದ ಸನ್ಮಾನಿತನಾಗುತ್ತೇನೆ. ನೀನೋ ಅನಕ್ಷರಸ್ಥ ರೈತ. ಇದೆಲ್ಲಾ ನಿನಗೆ ಅರ್ಥವಾಗದು’ ಎಂದು ಬಾಯಿಮುಚ್ಚಿಸುತ್ತಿದ್ದನು.

ಒಂದು ದಿನ ಮಹಾರಾಜರು ಮಾರುವೇಷದಲ್ಲಿ ರಾಜ್ಯದಲ್ಲಿ ಪ್ರವಾಸ ಮಾಡುವಾಗ ರಾಮಯ್ಯನ ಹೊಲಗದ್ದೆಯ ಬಳಿ ಬಂದರು. ಸಮೃದ್ಧ ಫ‌ಸಲನ್ನು ಕಂಡು ಮಹಾರಾಜರು ಸಂತುಷ್ಟರಾದರು. ದೂರದಲ್ಲಿ ಕೆಲಸ ಮಾಡುತ್ತಿದ್ದ ರಾಮಯ್ಯನನ್ನು ಕರೆದು ವಿಚಾರಿಸಿದರು. ರಾಮಯ್ಯನ ಪರಿಶ್ರಮ ಮಹಾರಾಜರನ್ನು ಸೆಳೆಯಿತು. ಮಾರುವೇಷದಲ್ಲಿದ್ದ ಮಹಾರಾಜರು “ರಾಮಯ್ಯ, ನಿನ್ನ ಕರ್ತವ್ಯ ನಿಷ್ಠೆ, ಶ್ರಮ ಕಂಡು ನನಗೆ ತುಂಬಾ ಸಂತಸವಾಗಿದೆ. ನಾಳೆ ಅರಮನೆಗೆ ಬಾ. ನನ್ನ ಮಕ್ಕಳಿಗೂ ನಿನ್ನ ಶ್ರಮದ ಪರಿಚಯ ಮಾಡಿಕೊಡು’ ಎಂದನು. ರಾಮಯ್ಯನಿಗೆ ಮಹಾರಾಜರ ಗುರುತು ಆಗಲೂ ಹತ್ತಲಿಲ್ಲ. ಅವನು, ಮಾರುವೇಷದಲ್ಲಿದ್ದ ಮಹಾರಾಜನನ್ನು ಅರಮನೆಯಲ್ಲಿ ಕೆಲಸ ಮಾಡುವಾತ ಎಂದು ತಿಳಿದು “ಅರಮನೆಯ ಭಟರು ಯಾರನ್ನು ನೋಡಲು ಬಂದಿದ್ದೀಯ ಎಂದು ಕೇಳಿದರೆ ಏನು ಹೇಳಲಿ?’ ಎಂದು ತಿಳಿದ. ಮಹಾರಾಜ “ಅರಮನೆಯ ಸೇವಕರಿಗೆ ನೀನೊಬ್ಬ ರೈತ. ರೈತರ ಮಹಾಸೇವಕನನ್ನು ನೋಡಬೇಕಿದೆ ಎಂದು ಹೇಳಿದರೆ ಸಾಕು. ನನ್ನ ಬಳಿ ಕರೆದು ತರುತ್ತಾರೆ’ ಎಂದ. ರಾಮಯ್ಯ “ಆಗಲಿ’ ಎಂದು ಒಪ್ಪಿಕೊಂಡ.

ಮರುದಿನ ರಾಮಯ್ಯ ಅರಮನೆಗೆ ತೆರಳಲು ಸಿದ್ಧನಾಗುತ್ತಿದ್ದಾಗ ಕಮಲಾಕರ “ಎಲ್ಲಿಗೆ ಹೋಗುತ್ತಿದ್ದೀಯಾ?’ ಎಂದು ಕೇಳಿದ. ರಾಮಯ್ಯ ಅರಮನೆಗೆ ಹೋಗುತ್ತಿರುವ ವಿಚಾರ ಹೇಲಿ ಹಿಂದಿನ ದಿನ ನಡೆದ ಘಟನೆಯನ್ನು ವಿವರಿಸಿದ. ಅವನು ಅದನ್ನು ನಂಬಲಿಲ್ಲ. ಆಗ ರಾಮಯ್ಯ ಅವನನ್ನೂ ತನ್ನ ಜೊತೆ ಕರೆದೊಯ್ದನು. ಅರಮನೆಯಲ್ಲಿ ರಾಮಯ್ಯನಿಗೆ ರಾಜಾತಿಥ್ಯ ದೊರೆಯಿತು. ರಾಮಯ್ಯನಿಗೆ ತನ್ನನ್ನು ಅರಮನೆಗೆ ಕರೆಸಿಕೊಂಡಿದ್ದು ಮಹಾರಾಜರೇ ಎಂದು ತಿಳಿದು ದಿಗ್ಭ್ರಮೆಯಾಯಿತು. ಮಹಾರಾಜರು, ರಾಮಯ್ಯನ ಕೃಷಿ ಸಾಧನೆಯನ್ನು ಹೊಗಳುತ್ತಾನೆ. “ರಾಮಯ್ಯನಂಥವರಿಂದಲೇ ತಮ್ಮ ರಾಜ್ಯ ಸುಭಿಕ್ಷವಾಗಿರುವುದು’ ಎಂದು ಹೇಳಿ ಸನ್ಮಾನಿಸಿದನು. ಇದನ್ನು ಕಂಡು ಕಮಲಾಕರನ ಅಹಂಕಾರ ಕರಗಿತು. ಅವನು ತಂದೆಯೆದುರು ತಲೆತಗ್ಗಿಸಿ ನಿಂತ. “ಸಾಧನೆ ಮಾಡಲು ವಿದ್ವಾಂಸನೇ ಆಗಬೇಕೆಂದಿಲ್ಲ. ಮಾಡುವ ಕೆಲಸವನ್ನು ಶ್ರದ್ದೆಯಿಂದ ಮಾಡುವ ಮೂಲಕ ಯಾರು ಬೇಕಾದರೂ ಸಾಧಕರಾಗಬಹುದು’ ಎಂದು ಹೇಳಿ ರಾಮಯ್ಯ ಮಗನನ್ನು ಆಲಂಗಿಸಿದ.

Advertisement

– ವೆಂಕಟೇಶ ಚಾಗಿ

Advertisement

Udayavani is now on Telegram. Click here to join our channel and stay updated with the latest news.

Next