ನವದೆಹಲಿ: ಒಂದು ವೇಳೆ ಭಾರತ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಿದರೆ, ಭಾರತ ಸೂಪರ್ ಪವರ್ ರಾಷ್ಟ್ರವಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ (ಆಗಸ್ಟ್ 27) ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಡಿಐಎಟಿ(ಡಿಫೆನ್ಸ್ ಇನ್ಸ್ ಟಿಟ್ಯೂಟ್ ಆಫ್ ಅಡ್ವಾನ್ಸಡ್ ಟೆಕ್ನಾಲಜಿ)ಯ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಶೋಧನೆ ಮತ್ತು ಹೊಸ ಬದಲಾವಣೆಯ ಮೂಲಕ ದೇಶವನ್ನು ಕೊಂಡೊಯ್ಯುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಟಿಬದ್ಧರಾಗಿದ್ದಾರೆ ಎಂದರು.
“ಸಶಸ್ತ್ರ ಪಡೆ, ಕೈಗಾರಿಕೆಗಳು ಮತ್ತು ಅಕಾಡೆಮಿಗಳ ಸಾಮೂಹಿಕ ಪ್ರಯತ್ನಗಳ ಮೂಲಕ ಸಂಶೋಧನೆ ಮತ್ತು ಹೊಸ ಬದಲಾವಣೆಯಲ್ಲಿ ಪ್ರಗತಿ ಸಾಧಿಸಲು ರಕ್ಷಣಾ ಸಚಿವಾಲಯ ಕೆಲವೊಂದು ಹೆಜ್ಜೆಯನ್ನಿಟ್ಟಿದ್ದು, ಇದನ್ನು ಪರಸ್ಪರ ತಿಳಿವಳಿಕೆ ಮತ್ತು ಜ್ಞಾನದ ಹಂಚಿಕೆ ಹಾಗೂ ಉತ್ತಮ ಸಾಧನೆಗಳ ಮೂಲಕ ಕಾರ್ಯಗತಗೊಳಿಸಬೇಕಾಗಿದೆ” ಎಂದು ಸಿಂಗ್ ತಿಳಿಸಿದ್ದಾರೆ.
ಇತ್ತೀಚೆಗೆ ನಾಗ್ಪುರಕ್ಕೆ ಭೇಟಿ ನೀಡಿದ ವಿಚಾರದ ಕುರಿತು ಪ್ರಸ್ತಾಪಿಸಿದ ರಾಜನಾಥ್ ಸಿಂಗ್, ಐದು ತಿಂಗಳಲ್ಲಿ ಖಾಸಗಿಯವರು ತಯಾರಿಸಿದ ಒಂದು ಲಕ್ಷ ಹ್ಯಾಂಡ್ ಗ್ರೆನೇಡ್ ಗಳನ್ನು ಭಾರತೀಯ ಸೇನೆಗೆ ಪೂರೈಕೆ ಮಾಡಲಾಗಿದೆ. ಅಷ್ಟೇ ಅಲ್ಲ ಈ ಸಂಸ್ಥೆ ಹೆಚ್ಚಿನ ಬೆಲೆಗೆ ಇದೇ ಮಾದರಿಯ ಗ್ರೆನೇಡ್ ಗಳನ್ನು ಇಂಡೋನೇಷ್ಯಾಕ್ಕೂ ರಫ್ತು ಮಾಡಿರುವುದಾಗಿ ಹೇಳಿದರು.