Advertisement

ಶತಮಾನದ ಕೆರೆಗೆ ಹೊಸ ಸ್ಪರ್ಶ ನೀಡಿದ ಮಾಧವ ಭಟ್ ಕುಲ್ಲಂಗಾಲು

07:54 PM Mar 24, 2021 | Team Udayavani |

ಸುರತ್ಕಲ್:   ಮರ ಬಳ್ಳಿಗಳಿಂದ ಕೂಡಿದ ಕಿರು ಅರಣ್ಯ. ಯಾವುದೇ ಗುಡಿ ಗೋಪುರವಿರದ ನಾಗನ ಸನ್ನಿಧಿ. ಮಳೆಗಾಲದಲ್ಲಿ ಮೇಲಿನಿಂದ ಹರಿಯುವ ಮಳೆ ನೀರು ನಾಗನಿಗೆ ಅಭಿಷೇಕ ಮಾಡುತ್ತಾ ಕೆಳಗಿನ ತಗ್ಗು ಪ್ರದೇಶಲ್ಲಿನ ಕೆರೆಯನ್ನು ತುಂಬುವ ಪ್ರಕೃತಿ ಸಹಜ ದೃಶ್ಯ ಇಂದು ಅಪರೂಪ. ಇಂತಹ ನೈಸರ್ಗಿಕ  ಶತಶತಮಾನದ ಐತಿಹ್ಯದ ಕೆರೆಯೊಂದು ಇದೀಗ ಸದ್ದಿಲ್ಲದೆ ಅಭಿವೃದ್ಧಿ ಹೊಂದುತ್ತಿದೆ.

Advertisement

ಇದಕ್ಕೆ ಹೊಸ ಸ್ಪರ್ಶ ನೀಡುತ್ತಿರುವವರು ಕೃಷಿಕ, ಅದ್ಯಾತ್ಮ ಚಿಂತಕ ,ಯೋಗ ಸಾಧಕ ಮಾಧವ ಭಟ್ ಕುಲ್ಲಂಗಾಲು.

ಜೀವನದಲ್ಲಿ ಹಣ ಸಂಪಾದನೆ ಹೆಚ್ಚಾದರೆ ಕೊಡುವ ಮನಸ್ಸಿರುವುದಿಲ್ಲ. ಇಲ್ಲದವರಿಗೆ ಏನಾದರೂ ಸಾಧನೆ ಮಾಡುವ ಹಂಬಲವಿರುತ್ತದೆ. ಆದರೆ ಇದಕ್ಕೆ ಅಪವಾದ ಎಂಬಂತೆ ಕುಲ್ಲಂಗಾಲು ಮಾಧವ ಭಟ್ ಅವರು ತಾವು ಕಷ್ಟಪಟ್ಟು ಸಂಪಾದಿಸಿದ ಹಣದಿಂದ  ಕೆರೆಯೊಂದನ್ನು ಅಭಿವೃದ್ಧಿ ಪಡಿಸಿ ಸುತ್ತಮುತ್ತಲಿನ ಬಾವಿ,ಕೆರೆಗಳಲ್ಲಿ ಅಂತರ್ಜಲ ಹೆಚ್ಚಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

 

Advertisement

ಸುಮಾರು ಎರಡೂವರೆ ಎಕರೆ ಪ್ರದೇಶವನ್ನು ಇದಕ್ಕಾಗಿ ಬಳಸಿ ಸುಸಜ್ಜಿತ ಕೆರೆಯೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ.30 ಅಡಿ ಆಳ  125 ಫೀಟ್ ಅಗಲ,140 ಫೀಟ್ ಉದ್ದಕ್ಕೆ ಈ ಕೆರೆ ವಿಸ್ತರಿಸಿ ನೈಸರ್ಗಿಕವಾಗಿ ಗುಡ್ಡದ ಮೂರು ಕಡೆಗಳಿಂದ ಹರಿದು ಬರುವ ಮಳೆ ನೀರನ್ನು ನಿಲ್ಲಿಸಲು ಯೋಜನೆ ರೂಪಿಸಿದ್ದಾರೆ. ಯಾವುದೇ ಕಸಕಡ್ಡಿ ಬಾರದೆ ಸ್ವಚ್ಚ ನೀರು ಹರಿಯಲು ಫಿಲ್ಟರ್ ವ್ಯವಸ್ಥೆ ಮಾಡಿದ್ದಾರೆ.

ಜನವರಿ ತಿಂಗಳಲ್ಲಿ ತಮ್ಮ ಯೋಜನೆ ಕಾರ್ಯಗತಕ್ಕಿಳಿಸಿದ ಮಾಧವ ಭಟ್ಟರು ಇದೀಗ ಶೇ 50ರಷ್ಟು ಕೆಲಸ ಮುಗಿಸಿದ್ದಾರೆ.ಸುತ್ತಲೂ ತಡೆಗೋಡೆ,ಕೆರೆಯ ಹೂಳೆತ್ತುವ ಕೆಲಸ ಪ್ರಗತಿಯಲ್ಲಿದೆ. ಮುಂದಿನ ಮಳೆಗಾದ ಒಳಗಾಗಿ ಇಲ್ಲಿ ಸುಸಜ್ಜಿತ ಕೆರೆ ಕಂಡುಬರಲಿದೆ. ಇದರಿಂದ ಸುತ್ತಲಿನ ಮನೆಗಳ ಬಾವಿ,ಕೆರೆ ಸಮೃದ್ಧವಾದರೆ,ತೋಟಗಳು ನಳನಳಿಸುವುದರಲ್ಲಿ ಸಂಶಯವಿಲ್ಲ.

ಸುತ್ತಲೂ ಅದ್ಯಾತ್ಮ ,ಯೋಗಕ್ಕೆ ಬೇಕಾದ ವ್ಯವಸ್ಥೆ ಇಲ್ಲಿರಲಿದೆ.ಇದರ ಜತೆಗೆ ನೈಸರ್ಗಿಕ ನಾಗಬನದ ಪಾವಿತ್ರ್ಯಕ್ಕೂ ಧಕ್ಕೆ ಬಾರದಂತೆ ಧ್ಯಾನ,ಯೋಗಕ್ಕೆ ಅವಕಾಶವಿರಲಿದೆ.

ಮೋದಿ ಮನ್ ಕಿ ಬಾತ್ ಪ್ರೇರಣೆ

ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ನಲ್ಲಿ ಅಂತರ್ಜಲ ಹೆಚ್ಚಳಕ್ಕೆ ಎಲ್ಲರೂ ಮುಂದಾಗಿ ಎಂದು ಪ್ರೋತ್ಸಾಹ,ಪ್ರೇರಣೆಯ ಮಾತುಗಳನ್ನಾಡಿದ್ದರು. ಇದನ್ನು ಕೇಳಿಸಿಕೊಂಡ  ಇವರು ತಮ್ಮ ಕುಟುಂಬದ  ಜಮೀನಿನಲ್ಲಿರುವ  ಕೆರೆಯನ್ನು ಉಳಿಸಲು ಮುಂದಾಗಿಯೇ ಬಿಟ್ಟಿದ್ದಾರೆ.ಯಾರ ನೆರವಿಲ್ಲದೆ ಕೂಡಿಟ್ಟ ಹಣವನ್ನು ಇದಕ್ಕಾಗಿ ಬಳಸುತ್ತಿದ್ದಾರೆ. ಅಂದಾಜು 50 ಲಕ್ಷ ರೂ.ಇದಕ್ಕಾಗಿ ವೆಚ್ಚವಾಗಲಿದೆ.

ಬೇಸಿಗೆ ನೀರಿನ ಸಮಸ್ಯೆಗೆ ಪರಿಹಾರ;

ಇನ್ನೇನು ಬೇಸಿಗೆಯ ದಿನಗಳು ಕಾಲಿಡಲಿವೆ. ಬೇಸಿಗೆ ಎಂದೊಡನೆ ಮನದಂಗಳದಲ್ಲಿ ಮೆರವಣಿಗೆ ಹೊರಡುವುದು ಎಲ್ಲೆಡೆ ನೀರಿಗಾಗಿ ಹಾಹಾಕಾರ, ಖಾಲಿ ಕೊಡಗಳ ಪ್ರದರ್ಶನ, ಬಂದ್, ಗಲಾಟೆ. ಬೇಸಿಗೆಯ ಈ ದಿನಗಳಲ್ಲಿ ನಮ್ಮ ಪಾಡೇ ಹೀಗಾದರೆ ಕಾಡಿನ ಪ್ರಾಣಿ-ಪಕ್ಷಿಗಳ ಗತಿ? ಸದಾ ಸ್ವಾರ್ಥಕ್ಕಾಗಿ ತಲೆಕೆಡಿಸಿಕೊಳ್ಳುವ ನಾವೆಂದಾದರೂ ಹನಿ ನೀರಿಗಾಗಿ ಹಪಹಪಿಸುವ ಪ್ರಾಣಿ ಪಕ್ಷಿಗಳ ಬಗೆಗೆ ಯೋಚಿಸಿದ್ದೇವೆಯೇ? ಕೆರೆ ನೀರು ಕುಡಿದವರು ಎಂಬ ವಾಡಿಕೆ ಮಾತನ್ನು ಕೇಳಿದ್ದೀರಿ. ಮಾಧವ ಭಟ್ ಅವರು ಕೆರೆಗೆ ಹೊಸ ಸ್ಪರ್ಶ ನೀಡುತ್ತಿದ್ದಾರೆ.  ತಾವು ಕೃಷಿ, ವ್ಯಾಪಾರ ಮಾಡಿ ಕೂಡಿಟ್ಟ   ಹಣದಲ್ಲಿ! ತಮಗಾಗಿ ಅಲ್ಲ, ತಮ್ಮ ಜಮೀನಿಗಾಗಿ ಅಲ್ಲ. ಇವರು ಕೆರೆ ಕಟ್ಟಿದ್ದು  ಅಂತರ್ಜಲ ಹೆಚ್ವಳಕ್ಕಾಗಿ, ಸಮೀಪದಲ್ಲಿರುವ ಸರೀಸೃಪಗಳಿಗೆ, ಕಾಡಿನ ಪ್ರಾಣಿಪಕ್ಷಿಗಳಿಗಾಗಿ!

ಪ್ರಧಾನಿಯವರ ಆಶಯದಂತೆ  ಕೆರೆ ಹೊಸ ರೂಪ ನೀಡುವ ಆಸಕ್ತಿ ಬಂತು.ಇದರ ಜತೆಗೆ ಜೀವಿತಾವಧಿಯಲ್ಲಿ ಪ್ರಕೃತಿ ಸಹಜ ಕೊಡುಗೆ ನೀಡಬೇಕೆಂಬ ಆಸೆಯೂ ಇತ್ತು. ತಂದೆಯವರಾದ  ಕುಲ್ಲಂಗಾಲು ದಿ .ವೆಂಕಟ್ರಾಜಭಟ್ಟರ ಆಶೀರ್ವಾದಿಂದ  ಮನೆತನಕ್ಕೆ ಸಂಬಂಧಿಸಿದ ನಾಗಳಿಕೆ ಎಂದು ಪ್ರಸಿದ್ಧಿ ಪಡೆದಿರುವ ವಿಶಾಲ ಪ್ರದೇಶದಲ್ಲಿ ಹಬ್ಬಿ ನಿಂತಿರುವ ನಾಗದೇವರ ಬನದಸಮೀಪದ ಕೆರೆಯನ್ನು ಅಭಿವೃದ್ಧಿ ಮಾಡಿ ಅಂತರ್ಜಲ ಸೆಲೆ ಹೆಚ್ಚಿಸಲು ಮುಂದಾಗಿದ್ದೇನೆ. ಇದರಿಂದ ಸುತ್ತಲಿನ ಪ್ರದೇಶಕ್ಕೆ ಪ್ರಯೋಜನವಾಗಲಿದೆ. -ಮಾಧವ ಭಟ್ ಕುಲ್ಲಂಗಾಲು

Advertisement

Udayavani is now on Telegram. Click here to join our channel and stay updated with the latest news.

Next