Advertisement

ಸಾಧನೆ ಎದುರಿಗಿದೆ, ಅಳೆಯಬೇಕಾದ್ದು ಜನ

08:15 AM Feb 17, 2018 | Team Udayavani |

ಯಾವುದೇ ರಾಜ್ಯದ ಮುಖ್ಯಮಂತ್ರಿಗೆ ಅಧಿಕಾರ ಅವಧಿಯ ಕೊನೆಯ ವರ್ಷ ಕತ್ತಿಯ ಅಲುಗಿನ ನಡಿಗೆಯಾಗಿರುತ್ತದೆ. ಕೆಲವೇ ರಾಜಕಾರಣಿಗಳು ಅದನ್ನು ನಿರಾಯಾಸವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುತ್ತಾರೆ. ಅಂಥವರ ಸಾಲಿಗೆ  ಸಿಎಂ ಸಿದ್ದರಾಮಯ್ಯ ಸೇರುತ್ತಾರೆ.  ಅವರ ವರ್ಚಸ್ಸು ವರ್ಷದಿಂದ ವರ್ಷಕ್ಕೆ ಬದಲಾಗುತ್ತಾ ಬಂತು. ಸರಕಾರ ಮೂರು ವರ್ಷಗಳು ಪೂರ್ಣಗೊಂಡು ನಾಲ್ಕನೇ ವರ್ಷಕ್ಕೆ ಕಾಲಿಟ್ಟಾಗ ವರ್ಚಸ್ಸು ಕ್ಷೀಣಿಸಿದಂತೆ ಕಂಡು ಬಂತು. ಅನಂತರ  ವೈಯಕ್ತಿಕವಾಗಿಯೂ ನೋವಿನಿಂದ ಕುಗ್ಗಿದ್ದರು. ಐದನೇ ವರ್ಷದಲ್ಲಿ  ಎಲ್ಲರ ನಿರೀಕ್ಷೆಗೆ ಮೀರಿ  ಎದ್ದು ನಿಂತರು. ವಿಪಕ್ಷ ಬಿಜೆಪಿ  ಸರಕಾರದ ವಿರುದ್ಧ ಹೋರಾಟವನ್ನು ರಾಜ್ಯದೆಲ್ಲೆಡೆ ಮಾಡುತ್ತಿದೆಯೋ, ಅದೇ ರೀತಿ ತಮ್ಮ ಸಾಧನೆ  ಜನರಿಗೆ ವಿವರಿಸಲು ಸಿದ್ದರಾಮಯ್ಯನವರೂ ರಾಜ್ಯವ್ಯಾಪಿ ಸಂಚರಿಸಿದರು. ಅವರಿಗೆ ಈಗ ಒದಗಿಬಂದ ಸುವರ್ಣಾವಕಾಶ ರಾಜ್ಯ ಬಜೆಟ್‌ 2018-19. ಐದು ವರ್ಷಗಳ ಸಾಧನೆಗಳನ್ನು ನಾಲ್ಕು ಗಂಟೆಗಳ 173 ಪುಟಗಳ ಮೂಲಕ ವಿವರಿಸುವಲ್ಲಿ ಯಶಸ್ವಿಯಾದರು. ಈ ಬಾರಿ ಭಾರೀ ಪ್ರಮಾಣದಲ್ಲಿ ಘೋಷಣೆಗಳು ಇರಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಹಾಗಾಗಲಿಲ್ಲ. ಸಮತೋಲನದಿಂದ  ಸಾಧನೆ  ವಿವರಿಸುತ್ತಾ , ಆಯ್ದ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದರು. ಸರಕಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು , ಅಹಿಂದ ವರ್ಗಕ್ಕೆ  40 ಸಾವಿರ ಕೋಟಿ ರೂಪಾಯಿಗಳ ನೆರವಿನ ಪ್ರಸ್ತಾವವೂ ಬಜೆಟ್‌ನಲ್ಲಿದೆ. ಭಾಗ್ಯಗಳ ಸುರಿಮಳೆಗಳಿಲ್ಲದೆ ಜಾಗರೂಕತೆಯಿಂದ ಸಿದ್ಧಪಡಿಸಿದ ಬಜೆಟ್‌ನಲ್ಲಿ  ಸಿಎಂ ಅನುಭವ ಸ್ಪಷ್ಟವಾಗಿ ಗೋಚರಿಸುತ್ತದೆ. ಜನರನ್ನು ಮರುಳಾ ಗಿಸದೆ ಭರವಸೆ ನೀಡದೆ ನಯವಾಗಿ,  ಚಾಕಚಕ್ಯತೆಯಿಂದ ಹೇಗೆ ಬಜೆಟ್‌ ಮಂಡಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಬಜೆಟ್‌ ಅನುಷ್ಠಾನ ಆರಂಭವಾಗುವ ಹೊತ್ತಿಗೆ ಚುನಾವಣಾ ಸಮರ ಆರಂಭವಾಗಿರುತ್ತದೆ. ಹಾಗಾಗಿ ಅದೃಷ್ಟ ಚೆನ್ನಾಗಿದ್ದರೆ ಮತ್ತೂಂದು ಬಜೆಟ್‌ ಮಂಡಿಸುವ ಅವಕಾಶ ಸಿಕ್ಕಿ ದಾಖಲೆ ಮುರಿಯಬಹುದು. ಬಜೆಟ್‌ ನಾಡಿಗೆ ಉಪಯುಕ್ತವಲ್ಲ ಎಂಬುದನ್ನು ವಿಪಕ್ಷಗಳು ಜನರಿಗೆ ಹೇಗೆ ಮನದಟ್ಟು ಮಾಡಬಹುದು ಎಂಬುದೇ  ಪ್ರಶ್ನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next