Advertisement

ಕಾಂಗ್ರೆಸ್‌ ನಿಂದ ಅಚ್ಚೆ ದಿನ್‌: ಡಾ|ಖರ್ಗೆ

12:44 PM Mar 12, 2018 | |

ಜೇವರ್ಗಿ: ಕಳೆದ ನಾಲ್ಕುವರೆ ವರ್ಷಗಳಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಲವಾರು ಜನಪ್ರಿಯ ಯೋಜನೆ ಜಾರಿಗೆ ತರುವ ಮೂಲಕ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದು, ಕಾಂಗ್ರೆಸ್‌ನಿಂದ ಮಾತ್ರ ಈ ದೇಶಕ್ಕೆ ಅಚ್ಚೆ ದಿನ್‌ ಬರಲಿದೆ ಎಂದು ಲೋಕಸಭೆ ಕಾಂಗ್ರೆಸ್‌ ಪಕ್ಷದ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ಯಡ್ರಾಮಿ ಪಟ್ಟಣದ ಸುಂಬಡ ರಸ್ತೆಯಲ್ಲಿರುವ ಯುಕೆಪಿ ಕ್ಯಾಂಪ್‌ನ ವಸತಿ ಗೃಹದ ಆವರಣದಲ್ಲಿ ಜಿಲ್ಲಾಡಳಿತ ವತಿಯಿಂದ ರವಿವಾರ ಆಯೋಜಿಸಲಾಗಿದ್ದ ನೂತನ ಯಡ್ರಾಮಿ ತಾಲೂಕು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಭಾಷಣದ ಮೂಲಕವಷ್ಟೇ ಅಚ್ಚೇ ದಿನ್‌ ಆಯೇಗಾ ಎಂದು ಹೇಳುತ್ತಿದ್ದಾರೆ. ಅಧಿ ಕಾರಕ್ಕೆ ಬಂದು ನಾಲ್ಕು ವರ್ಷಗಳು ಗತಿಸಿದರೂ ಅಚ್ಚೆ ದಿನ್‌ ಬರಲೇ ಇಲ್ಲ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರದಲ್ಲಿ ಬಡವರಿಗೊಂದು ಶ್ರೀಮಂತರಿಗೊಂದು ನ್ಯಾಯ ಇದೆ. ಕಳೆದ 4 ವರ್ಷಗಳಲ್ಲಿ ಮೋದಿ ಒಂದೂ ಭರವಸೆ ಈಡೇರಿಸಿಲ್ಲ. ಉದ್ಯಮಿಗಳು ಲಕ್ಷಾಂತರ ಕೋಟಿ ರೂ. ಬ್ಯಾಂಕ್‌ಗಳಲ್ಲಿ ಬೇನಾಮಿ ಸಾಲ ಪಡೆದು ಪರಾರಿಯಾಗಿದ್ದೆ ಬಿಜೆಪಿ ಸರ್ಕಾರದ ಸಾಧನೆಯಾಗಿದೆ. 540 ಕೋಟಿ ರೂ. ಗೆ ಸಿಗುವ ಯುದ್ದ ಸಾಮಗ್ರಿಯನ್ನು 1,540 ಕೋಟಿ ರೂ. ಗೆ ಖರೀದಿ ಮಾಡಲಾಗುತ್ತಿದೆ. ಹಸಿರು ಶಾಲು ಹಾಕಿಕೊಂಡು ಮುಖ್ಯಮಂತ್ರಿಯಾಗಿ ಪದಗ್ರಹಣ
ಮಾಡಿದ್ದ ಬಿ.ಎಸ್‌. ಯಡಿಯೂರಪ್ಪ ರೈತರ ಬಗ್ಗೆ ಕಾಳಜಿ ವಹಿಸಲಿಲ್ಲ. ಆದರೆ ಅಧಿಕಾರ ಕಳೆದುಕೊಂಡ
ಮೇಲೆ ರೈತರ ಮೇಲೆ ಅನುಕಂಪ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಯೊಬ್ಬರಿಗೂ ಸ್ವಾಭಿಮಾನ ಕೊಟ್ಟ ಪಕ್ಷ ಕಾಂಗ್ರೆಸ್‌. ಈ ಭಾಗದ ಅಭಿವೃದ್ಧಿಗೆ ಸಂವಿಧಾನದ 371ನೇ(ಜೆ) ಕಲಂ ತಿದ್ದುಪಡಿಗಾಗಿ ಅವಿರತ ಶ್ರಮಿಸಲಾಗಿದೆ ಎಂದು ಹೇಳಿದರು.

Advertisement

ರಾಜ್ಯದಲ್ಲಿ 50 ಹೊಸ ತಾಲೂಕುಗಳು ಘೋಷಣೆಯಾಗಿವೆ. ಅದರಲ್ಲಿ ಹೈ.ಕ. ಭಾಗದಲ್ಲಿ 12 ತಾಲೂಕುಗಳು ಉದಯವಾಗಿದ್ದು ಹೆಮ್ಮೆಯ ವಿಷಯ. ಎಚ್‌ಕೆಆರ್‌ಡಿಬಿ ಅನುದಾನದಲ್ಲಿ ಪ್ರತಿ ನೂತನ ತಾಲೂಕಿಗೆ 15 ಕೋಟಿ ರೂ. ಮೀಸಲಿಟ್ಟಿದ್ದು, ಶಾಸಕ ಡಾ| ಅಜಯಸಿಂಗ್‌ ಅವರು ಒತ್ತಡ ಹಾಕಿ ಹಣ ಬಿಡುಗಡೆಗೆ ಪ್ರಯತ್ನಿಸಬೇಕು ಎಂದು ಹೇಳಿದರು.

ನೂತನ ಯಡ್ರಾಮಿ ತಾಲೂಕಿನ ತಹಶೀಲ್ದಾರ ಕಚೇರಿ ಅಭಿವೃದ್ಧಿಗೆ ಸಂಸದರ ನಿಧಿಯಿಂದ ಖರ್ಗೆ ಅವರು ಸ್ಥಳದಲ್ಲಿಯೇ 7 ಲಕ್ಷ ರೂ. ಅನುದಾನ ಘೋಷಣೆ ಮಾಡಿ ಮಂಜೂರಿಗೊಳಿಸಿದರು. ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ| ಶರಣಪ್ರಕಾಶ ಪಾಟೀಲ, ಶಾಸಕ ಡಾ| ಅಜಯಸಿಂಗ್‌ ಮಾತನಾಡಿದರು. ಅಪರ ಜಿಲ್ಲಾ ಧಿಕಾರಿ ಭೀಮಾಶಂಕರ
ತೆಗ್ಗೆಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಪಂ ಅಧ್ಯಕ್ಷೆ ಚಂದಮ್ಮ ಸಂಗಣ್ಣ ಇಟಗಾ, ಜಿಪಂ ಸದಸ್ಯ ದಂಡಪ್ಪ ಸಾಹು ಕುರಳಗೇರಾ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಅಬ್ದುಲ್‌ ರಜಾಕ್‌ ಮನಿಯಾರ, ಗ್ರಾಪಂ ಅಧ್ಯಕ್ಷೆ ಮಂಜುಳಾ ಸುರೇಶ ಡಂಬಳ, ಯಡ್ರಾಮಿ ತಹಶೀಲ್ದಾರ ರಾಜಕುಮಾರ ಜಾಧವ, ಜೇವರ್ಗಿ ತಹಶೀಲ್ದಾರ ಬಸಲಿಂಗಪ್ಪ ನಾಯಕೋಡಿ, ತಾಪಂ ಇಒ ಪ್ರಭು ಮಾನೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಹಾಯಕ ಆಯುಕ್ತ ಎಂ. ರಾಚಪ್ಪ ಸ್ವಾಗತಿಸಿದರು, ಶಿಕ್ಷಕ ಸಿ.ಎಸ್‌. ಪಾಟೀಲ
ಯಲಗೋಡ ನಿರೂಪಿಸಿ ವಂದಿಸಿದರು.

ಅಖೀಲ ಭಾರತ ಟೆನ್‌ಪಿನ್‌ ಬೌಲಿಂಗ್‌ ಫೆಡರೇಶನ್‌ ಅಧ್ಯಕ್ಷರಾಗಿ ಆಯ್ಕೆಯಾದ ಡಾ| ಅಜಯಸಿಂಗ್‌ ಅವರನ್ನು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಇದೇ ಸಂದರ್ಭದಲ್ಲಿ ಅಭಿನಂದಿಸಿ ಸತ್ಕರಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಕಲಬುರಗಿ ಮಹಾಪೌರ ಶರಣುಕುಮಾರ ಮೋದಿ, ಜಿಪಂ ಸದಸ್ಯರಾದ ಶಾಂತಪ್ಪ ಕೂಡಲಗಿ, ರೇವಣಸಿದ್ದಪ್ಪ ಸಂಕಾಲಿ, ಲೀಲಾವತಿಗೌಡ್ತಿ ಪಾಟೀಲ, ಜಗದೇವ ಗುತ್ತೇದಾರ, ರಾಜಶೇಖರ ಸೀರಿ, ಶೌಕತ್‌ ಅಲಿ ಅಲೂರ, ಸಿದ್ದಲಿಂಗರೆಡ್ಡಿ ಇಟಗಿ, ಚಂದ್ರಶೇಖರ ಹರನಾಳ, ಮಲ್ಲಿಕರ್ಜುನ ಹಲಕರ್ಟಿ, ಬಸಲಿಂಗಪ್ಪ ತಾಳಿಕೋಟಿ, ಕಾಶಿಂ ಪಟೇಲ ಮುದಬಾಳ, ಗೊಲ್ಲಾಳಪ್ಪಗೌಡ ಮಾಗಣಗೇರಿ, ಅಬ್ದುಲ್‌ ನಬಿ ಖ್ಯಾತನಾಳ, ಈರಣ್ಣ ಕೂಮಬಾರ, ನಾಗಣ್ಣ ಹಾಗರಗುಂಡಗಿ, ಮರೆಪ್ಪ ಸರಡಗಿ ಭಾಗಿಯಾಗಿದ್ದರು.

ನೂತನ ಯಡ್ರಾಮಿ ತಾಲೂಕು ಉದ್ಘಾಟನಾ ಸಮಾರಂಭದಲ್ಲಿ ಯಡ್ರಾಮಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರುಕುಂ ಪಟೇಲ್‌ ಇಜೇರಿ ಹಾಗೂ ತೊಗರಿ ಮಂಡಳಿ ಮಾಜಿ ಅಧ್ಯಕ್ಷ ಅಮೃತರಾಯಗೌಡ ಪಾಟೀಲ ವಡಗೇರಾ ಅನುಪಸ್ಥಿತಿ ಕಂಡು ಸಂಸದ ಖರ್ಗೆ ಅವರು ಪ್ರಶ್ನಿಸಿದಾಗ ಹುಷಾರಿಲ್ಲದ ಕಾರಣಕ್ಕೆ ಬಂದಿಲ್ಲ ಎಂದು ಶಾಸಕರು ಉತ್ತರಿಸಿದರು. ಇದಕ್ಕೆ ಸುಮ್ಮನಿರದ ಖರ್ಗೆ ಅವರು ನಿಜವಾಗಿ ಹುಷಾರಿಲ್ಲವೋ ಅಥವಾ ಹುಷಾರಿಲ್ಲದಂಗೆ ಮಾಡಿದ್ದೀರಾ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next