Advertisement

2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ನನ್ನ ಕನಸು: ಅಚಂತ ಶರತ್‌ ಕಮಲ್‌ 

10:47 PM Aug 15, 2022 | Team Udayavani |

ಚೆನ್ನೈ: ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ 4 ಪದಕ ಗೆದ್ದು, 40ನೇ ವರ್ಷದಲ್ಲೂ ಅಮೋಘ ಸಾಧನೆಗೈದ ಟಿಟಿಪಟು ಅಚಂತ ಶರತ್‌ ಕಮಲ್‌ ಒಲಿಂಪಿಕ್ಸ್‌ ಗ್ಲೋರಿಯೊಂದಿಗೆ ವೃತ್ತಿಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದಿದ್ದಾರೆ.

Advertisement

ಕಳೆದ 20 ವರ್ಷಗಳಿಂದಲೂ ಉನ್ನತ ಮಟ್ಟದ ಪ್ರದರ್ಶನ ನೀಡುತ್ತಲೇ ಇರುವ ಅಚಂತ ಶರತ್‌ ಕಮಲ್‌, ತಮ್ಮ ಕ್ರೀಡಾ ಬದುಕಿನಲ್ಲಿ ಇನ್ನೂ ಒಲಿಂಪಿಕ್ಸ್‌ ಪದಕ ಗೆದ್ದಿಲ್ಲ. ಈಗಿನ ಬರ್ಮಿಂಗ್‌ಹ್ಯಾಮ್‌ ಗೇಮ್ಸ್‌ ಸಾಧನೆ ಕಂಡಾಗ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪದಕದ ಬಾಗಿಲು ತೆರೆದೀತು ಎಂಬುದು ಅವರ ನಂಬಿಕೆ.

“ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ ನನ್ನ ಬದುಕಿನ ಶ್ರೇಷ್ಠ ಕ್ರೀಡಾಕೂಟ. ಈವರೆಗೆ ನಾನು ಒಂದೇ ಕೂಟದಲ್ಲಿ 3 ಪದಕ ಗೆದ್ದಿರಬಹುದು, ಆದರೆ 4 ಪದಕ ಜಯಿಸಿದ್ದು ಇದೇ ಮೊದಲು. ಸದ್ಯ ನಿವೃತ್ತಿ ನಿರ್ಧಾರ ಮಾಡಿಲ್ಲ. ನನ್ನ ಪದಕಗಳ ಹಸಿವು ಇನ್ನೂ ಇಂಗಿಲ್ಲ. ಫಿಟ್‌ನೆಸ್‌ ಎಂಬುದು ನಮ್ಮ ಪಾಲಿನ ಕೀ. ಇದನ್ನು ಕಾಪಾಡಿಕೊಂಡರೆ ಒಲಿಂಪಿಕ್ಸ್‌ ಅರ್ಹತೆ ಅಸಾಧ್ಯವಲ್ಲ. ಪ್ಯಾರಿಸ್‌ ತಂಡ ಸ್ಪರ್ಧೆಗೆ ಅರ್ಹತೆ ಸಂಪಾದಿಸಿದ್ದೇ ಆದಲ್ಲಿ ಪದಕವೊಂದನ್ನು ಗೆಲ್ಲುವುದು ಖಚಿತ’ ಎಂಬ ದೃಢ ವಿಶ್ವಾಸ ಶರತ್‌ ಕಮಲ್‌ ಅವರದು.

ಹಂತ ಹಂತದ ಪ್ರಕ್ರಿಯೆ
“ಇದೊಂದು ಹಂತ ಹಂತದ ಪ್ರಕ್ರಿಯೆ. ಮೊದಲು ನಾವು ಕಾಮನ್ವೆಲ್ತ್‌ ಗೇಮ್ಸ್‌ ಹಂತ ತಲುಪಿದೆವು. ಮುಂದಿನದು ಏಷ್ಯಾಡ್‌. ಅನಂತರವೇ ಒಲಿಂಪಿಕ್ಸ್‌ ಸರದಿ. ಗೇಮ್ಸ್‌ ಚಿನ್ನಕ್ಕಾಗಿ ನಾನು 16 ವರ್ಷ ಕಾದೆ. 2006ರ ಬಳಿಕ ಇದು ಒಲಿದದ್ದು ಮೊನ್ನೆಯಷ್ಟೆ. 2006ರಲ್ಲಿ ನಾನು ಚಿಕ್ಕವ. ರ್‍ಯಾಂಕಿಂಗ್‌ 130ರಷ್ಟು ಕೆಳ ಮಟ್ಟದಲ್ಲಿತ್ತು. ನನ್ನ ಮೇಲೆ ಯಾವುದೇ ನಿರೀಕ್ಷೆ ಇರಲಿಲ್ಲ. ಈ ಬಾರಿ ನಿರೀಕ್ಷೆ ವಿಪರೀತವಾಗಿತ್ತು. ದೇಶದಲ್ಲಿ ಟಿಟಿ ಜನಪ್ರಿಯತೆ ಹೆಚ್ಚುತ್ತಿದೆ. ಯುವ ಜನಾಂಗದ ಮೇಲೆ ನಮ್ಮ ಸಾಧನೆ ಖಂಡಿತವಾಗಿಯೂ ಪ್ರಭಾವ ಬೀರಿದೆ’ ಎಂದು ಸಂತಸ ವ್ಯಕ್ತಪಡಿಸಿದರು ಅಚಂತ ಶರತ್‌ ಕಮಲ್‌.

“ನಾನೀಗ 38ನೇ ರ್‍ಯಾಂಕಿಂಗ್‌ ಹೊಂದಿದ್ದೇನೆ.ನನಗಿಂತ ಉನ್ನತ ರ್‍ಯಾಂಕಿಂಗ್‌ನ ಜಿ. ಸಥಿಯನ್‌ (36) ನಮ್ಮಲ್ಲೇ ಇದ್ದಾರೆ. ಇಷ್ಟು ಮೇಲ್ಮಟ್ಟದ ರ್‍ಯಾಂಕಿಂಗ್‌ ಆಟಗಾರರನ್ನು ನಮ್ಮ ದೇಶ ಯಾವತ್ತೂ ಹೊಂದಿರಲಿಲ್ಲ’ ಎಂಬ ಖುಷಿ ಶರತ್‌ ಕಮಲ್‌ ಅವರದು.

Advertisement
Advertisement

Udayavani is now on Telegram. Click here to join our channel and stay updated with the latest news.

Next