Advertisement

Hunsur: ಮೋಜಿಗಾಗಿ ಕಳ್ಳತನ ನಡೆಸಿದ್ದ ಆರೋಪಿ ಬಂಧನ

12:54 PM Dec 13, 2023 | Team Udayavani |

ಹುಣಸೂರು: ತಾಲೂಕಿನ ಗ್ರಾಮಾಂತರ ಠಾಣೆ ಹಾಗೂ ಬಿಳಿಕೆರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಒಂಟಿ ಮಹಿಳೆಯರ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, ಎರಡು ಬೈಕ್ ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

Advertisement

ತಾಲೂಕಿನ ಕೆಬ್ಬೆಕೊಪ್ಪಲು ಗ್ರಾಮದ ಮಂಜ(22) ಬಂಧಿತ ಆರೋಪಿ. ಈತನಿಂದ ಎರಡು ಬೈಕ್ ಹಾಗೂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆಯ ವಿವರ:

ಬಿಳಿಕೆರೆ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಒಡೆಯರ ಹೊಸಹಳ್ಳಿ, ಉದ್ದೂರು, ಹುಲ್ಲೇನಹಳ್ಳಿ, ಚಿಕ್ಕಾಡಿಗನಹಳ್ಳಿ, ಗುಡ್ಡೆಬಸವೇಶ್ವರ ದೇವಾಲಯದ ಬಳಿ ಹಾಗೂ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಣ್ಣೇನಹಳ್ಳಿ, ಕೊತ್ತೆಗಾಲ ಗೇಟ್ ಹಾಗೂ ನಾಗನಹಳ್ಳಿ ರಸ್ತೆಯ ರಂಗನಾಥ ಬಡಾವಣೆ ರಸ್ತೆಗಳಲ್ಲಿ ಆರೋಪಿ ಒಂಟಿ ಮಹಿಳೆಯರ ಬಳಿ ವಿಳಾಸ ಕೇಳುವ ನೆಪದಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಸರ ಸೇರಿದಂತೆ ತಾಳಿ, ಗುಂಡು, ಓಲೆಗಳನ್ನು ಕಿತ್ತು ಪರಾರಿಯಾಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ. ಹಲವೆಡೆ ಈತನ ಕೃತ್ಯ ಸಿ.ಸಿ.ಕ್ಯಾಮರಾದಲ್ಲಿ ಪತ್ತೆಯಾಗಿತ್ತು.

ಹಳೇ ಚಾಳಿ:

Advertisement

ಆರೋಪಿ  ಬೆನ್ನತ್ತಿದ ಬಿಳಿಕೆರೆ ಪೊಲೀಸರು ಮತ್ತೆ ಕೃತ್ಯಕ್ಕೆ ಹೊಂಚು ಹಾಕುತ್ತಿದ್ದ ವೇಳೆ ಆತನನ್ನು ಬಂಧಿಸಿ, ಹುಣಸೂರಿನ ವಿವಿಧ ಗಿರವಿ ಅಂಗಡಿಗಳಲ್ಲಿ ಗಿರವಿ ಇಟ್ಟಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಅದಲ್ಲದೆ ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದ ಬೈಕ್ ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್‌ಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಈ ಹಿಂದೆಯೂ ಸಹ ಬೈಕ್ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿದ್ದ.

ಕಿವಿಯನ್ನೇ ಹರಿದಿದ್ದ:

ಯಾವಾಗಲೂ ಒಂಟಿ ಮಹಿಳೆಯರನ್ನೇ ಟಾರ್ಗೇಟ್ ಮಾಡುತ್ತಿದ್ದ ಈತ ಮಹಿಳೆಯರನ್ನು ದಾರಿ ಕೇಳುವ, ಜಾನುವಾರು ಖರೀದಿಸುವ ನೆಪದಲ್ಲಿ ಕಣ್ಣಿಗೆ ಖಾರದಪುಡಿ ಎರಚಿ ಚಿನ್ನಾಭರಣ ಕಿತ್ತು ಪರಾರಿಯಾಗುತ್ತಿದ್ದ. ಈತನ ಕೃತ್ಯಕ್ಕೆ ಐವರು ಮಹಿಳೆಯರ ಕಿವಿಯೇ ಹರಿದು ಹೋಗಿತ್ತು.

ಈತ ಮೋಜಿಗಾಗಿ ಹಣ ಬೇಕಾದಾಗ ಕೃತ್ಯ ನಡೆಸಿ ಮತ್ತೆ ಕೆಲ ದಿನ ವಿರಾಮ ನೀಡುತ್ತಿದ್ದ. ಮತ್ತೆ ಹಣ ಬೇಕಾದಾಗ ಕಳ್ಳತನಕ್ಕಿಳಿಯುತ್ತಿದ್ದ. ಇದೇ ರೀತಿ ಕೃತ್ಯಕ್ಕೆ ಸಜ್ಜಾಗಿದ್ದಾಗಲೇ ಪೊಲೀಸರ ಕೈಗೆ ಸಿಕ್ಕಿ ಬಿದ್ದು ಸೆರೆವಾಸ ಅನುಭವಿಸುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next