Advertisement

ಬಾ ನಲ್ಲೆ ಮಧುಚಂದ್ರಕ್ಕೆ ಸಿನಿಮಾ ಮಾದರಿ ಪತ್ನಿ ಕೊಂದ!

11:19 AM Aug 18, 2022 | Team Udayavani |

ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಪತ್ನಿಯನ್ನು ಕೊಲೆಗೈದಿರುವ ಪತಿಯನ್ನು ಬಂಧಿಸಿರುವ ಘಟನೆ ಮಡಿವಾಳ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಬಿಹಾರ ಮೂಲದ ಜ್ಯೋತಿ ಕುಮಾರಿ (38) ಕೊಲೆಯಾದ ಮಹಿಳೆ. ಪತಿ ಪೃಥ್ವಿರಾಜ್‌(30) ಬಂಧಿತ ಆರೋಪಿ. ಕೃತ್ಯಕ್ಕೆ ಸಹಕರಿಸಿದ ಸಮೀರ್‌ ಕುಮಾರ್‌ ತಲೆಮರೆಸಿಕೊಂಡಿದ್ದಾನೆ.

12 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಪೃಥ್ವಿರಾಜ್‌, ಎಲೆಕ್ಟ್ರಾನಿಕ್ಸ್‌ ವಸ್ತುಗಳ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಬಿಹಾರ ಮೂಲದ ಜ್ಯೋತಿ ಕುಮಾರಿಯನ್ನು 2021ರ ನವೆಂಬರ್‌ನಲ್ಲಿ ಮದುವೆಯಾಗಿದ್ದನು. ಆದರೆ, ಇಬ್ಬರ ನಡುವೆ ವಯಸ್ಸಿನ ಅಂತರ ಹೆಚ್ಚಾಗಿದ್ದರಿಂದ ಕೌಟುಂಬಿಕ ವಿಚಾರದಲ್ಲಿ ಜಗಳ ನಡೆಯುತ್ತಿತ್ತು.

ಸಿನಿಮೀಯ ಮಾದರಿ ಕೊಲೆ: ಕನ್ನಡ ಸೂಪರ್‌ ಹಿಟ್‌ “ಬಾ ನಲ್ಲೆ ಮಧುಚಂದ್ರಕೆ” ಸಿನಿಮಾದ ನಾಯಕ ತನ್ನ ನಾಯಕಿಯನ್ನು ಹಿಮಾಲಯಕ್ಕೆ ಎತ್ತರದ ಪ್ರದೇಶ ದಿಂದ ತಳ್ಳಿ ಕೊಲೆಗೈಯುತ್ತಾನೆ. ಅದೇ ಮಾದರಿ ಪೃಥ್ವಿರಾಜ್‌ ಪತ್ನಿ ಜ್ಯೋತಿಕುಮಾರಿಯನ್ನು ಪ್ರವಾಸದ ನೆಪ ದಲ್ಲಿ ಕರೆದೊಯ್ದು ಕೊಲೆಗೈದಿದ್ದಾನೆ.

ಇದಕ್ಕೂ ಮುನ್ನ ಪತ್ನಿ ಕೊಲೆಗೈಯುವ ವಿಚಾರವನ್ನು ತನ್ನ ಸ್ನೇಹಿತ ಸಮೀರ್‌ ಕುಮಾರ್‌ ಬಳಿ ಹೇಳಿಕೊಂಡು ಸಂಚು ರೂಪಿಸಿದ್ದ ಆರೋಪಿ, ಪತ್ನಿಗೆ ಪುಸಲಾಯಿಸಿ ಆ.1ರಂದು ಪ್ರವಾಸಕ್ಕೆಂದು ಜೂಮ್‌ ಕಾರಿನಲ್ಲಿ ಉಡುಪಿ ಬಳಿ ಮಲ್ಪೆ ಬೀಚ್‌ಗೆ ಕರೆದೊಯ್ದಿದ್ದಾನೆ.

Advertisement

ಇದನ್ನೂ ಓದಿ: ಕೋಡಿ ಹೊಸಬೆಂಗ್ರೆಯಲ್ಲಿ ಕಡಲ್ಕೊರೆತ : ಮನೆ, ರಸ್ತೆ ಅಪಾಯದಲ್ಲಿ; ತಾತ್ಕಾಲಿಕ ಪರಿಹಾರ

ಈ ವೇಳೆ ಸಮುದ್ರದಲ್ಲಿ ಪತ್ನಿಯನ್ನು ಮುಳುಗಿಸಿ ಕೊಲ್ಲಲು ಮುಂದಾಗಿದ್ದ. ಆದರೆ, ಸಮುದ್ರಕ್ಕೆ ಯಾರು ಇಳಿಯದಂತೆ ನಾಮಫ‌ಲಕ ಹಾಕಿದ್ದರಿಂದ ಇದು ಸಾಧ್ಯವಾಗಿರಲಿಲ್ಲ. ಬಳಿಕ ಆ.2ರಂದು ಮಲ್ಪೆಯಿಂದ ಬೆಂಗಳೂರಿಗೆ ಬರುವ ಮಾರ್ಗಮಧ್ಯೆ ಶಿರಾಡಿ ಘಾಟ್‌ ಬಳಿ ರಾಜಘಟ್ಟದ ಸಮೀಪ ಕಾರಿನಲ್ಲೇ ಪತ್ನಿ ಕುತ್ತಿಗೆಗೆ ವೇಲ್‌ನಿಂದ ಬಿಗಿದು ಕೊಲೆಗೈದಿದ್ದ. ಬಳಿಕ ಆಕೆಯ ಮೃತದೇಹವನ್ನು ಸಮೀರ್‌ ಸಹಾಯದಿಂದ ಅರಣ್ಯದಲ್ಲಿ ಬಿಸಾಡಿ, ಸಾಕ್ಷ್ಯ ನಾಶಪಡಿಸಿ ಬೆಂಗಳೂರಿಗೆ ಬಂದಿದ್ದನು. ನಂತರ ತಾನೇ ಆ.5ರಂದು ಪೊಲೀಸ್‌ ಠಾಣೆಗೆ ದೂರು ನೀಡಿದ್ದ.

ಆದರೆ, ಆತನ ವರ್ತನೆಯಲ್ಲಿ ಅನುಮಾನಗೊಂಡು ಮನೆ ಸಮೀಪದ ಸಿಸಿ ಕ್ಯಾಮೆರಾ ಶೋಧಿಸಿದಾಗ ಮೂವರು ಒಂದೇ ಕಾರಿನಲ್ಲಿ ಹೋಗಿದ್ದು, ವಾಪಸ್‌ ಕೇವಲ ಇಬ್ಬರು ಬಂದಿರುವುದು ಗೊತ್ತಾ ಗಿದೆ. ಅಲ್ಲದೆ, ಆರೋಪಿಯ ಮೊಬೈಲ್‌ ನಂಬರ್‌ ಸಿಡಿಆರ್‌ ಪರಿಶೀಲಿಸಿದಾಗ ಪತ್ನಿ ಜತೆ ಮಲ್ಫೆ ಜತೆ ಇರುವುದು ಖಚಿತವಾಗಿತ್ತು. ಹೀಗಾಗಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಾಯಿಬಿಟ್ಟಿದ್ದಾನೆ.

ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ, ಮಡಿವಾಳ ಉಪವಿಭಾಗದ ಎಸಿಪಿ ಲಕ್ಷ್ಮೀನಾರಾಯಣ ಮಾರ್ಗದರ್ಶನದಲ್ಲಿ ಮಡಿವಾಳ ಠಾಣಾಧಿಕಾರಿ ಪ್ರಿಯಕುಮಾರ್‌ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

28 ವರ್ಷ ವಯಸ್ಸು ಸುಳ್ಳು, ದೈಹಿಕ ಸಂಪರ್ಕಕ್ಕೆ ನಿರಾಕರಣೆ

ಆರೋಪಿಯ ವಿಚಾರಣೆ ವೇಳೆ, ಜ್ಯೋತಿ ಕುಮಾರಿ ಮದುವೆ ವೇಳೆ ತನಗೆ 28 ವರ್ಷ ಎಂದು ಹೇಳಿದ್ದಳು. ಆದರೆ, ಆಕೆಗೆ 38 ವರ್ಷ ವಯಸ್ಸು ಆಗಿತ್ತು. ಅಲ್ಲದೆ, ಬಿ.ಕಾಂ ಪದವೀಧರೆಯಾಗಿದ್ದ ಆಕೆ, ಒಮ್ಮೆ ಯುಪಿಎಸ್‌ಸಿ ಪರೀಕ್ಷೆ ಬರೆದು ಅನುತ್ತೀರ್ಣಗೊಂಡಿದ್ದಳು. ಮತ್ತೆ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು. ಈ ವೇಳೆ ಯುವಕನ ಪರಿಚಯವಾಗಿ ಆತನೊಂದಿಗೆ ಚಾಟಿಂಗ್‌ ಮಾಡುತ್ತಿದ್ದಳು. ಅದನ್ನು ಪ್ರಶ್ನಿಸಿದಾಗ ಯಾವುದೇ ಅಕ್ರಮ ಸಂಬಂಧ ಹೊಂದಿಲ್ಲ ಎಂದು ಜ್ಯೋತಿ ತಿಳಿಸಿದ್ದಳು. ಜತೆಗೆ ನನಗೂ ಮತ್ತು ನನ್ನ ಮನೆಯವರಿಗೂ ನಾಗರಿಕತೆ ಇಲ್ಲ ಎಂದು ನಿಂದಿಸುತ್ತಿದ್ದಳು. ಪ್ರಮುಖವಾಗಿ ಮದುವೆಯಾದಾಗಿನಿಂದಲೂ ಇದುವರೆಗೂ ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಲು ನಿರಾಕರಿಸುತ್ತಿದ್ದಳು. ಅದರಿಂದ ಬೇಸತ್ತು ಆಕೆ ಯನ್ನು ಕೊಲೆಗೈಯಲು ನಿರ್ಧರಿಸಿದ್ದೆ. ಮಲ್ಪೆ ಬೀಚ್‌ನಲ್ಲಿ ಕೊಲೆಗೈಯಲು ಸಾಧ್ಯವಾಗದಿದ್ದಾಗ ಶಿರಾಡಿ ಘಾಟ್‌ನಲ್ಲಿ ಕೊಲೆಗೈದು ಮೃತದೇಹವನ್ನು ಅರಣ್ಯ ಪ್ರದೇಶದಲ್ಲಿ ಎಸೆದಿದ್ದೇನೆ ಎಂದು ಹೇಳಿಕೆ ನೀಡಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next