ಸುಳ್ಯ: ಇಲ್ಲಿಯ ಜಯನಗರದ ಯುವಕನೋರ್ವ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಬಗ್ಗೆ ಹಂಚಿಕೊಂಡ ನಿಂದನಾತ್ಮಕ ಬರಹವನ್ನು ಅಳಿಸುವಂತೆ ಶಾಸಕರ ಅಭಿಮಾನಿ ಬಳಗದ ಸದಸ್ಯರು ಆಗ್ರಹಿಸಿದ ಸಂದರ್ಭದಲ್ಲಿ ಸುಳ್ಯ ಪೊಲೀಸರು ಪ್ರಕರಣವನ್ನು ಇತ್ಯರ್ಥ ಪಡಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಜಯನಗರದ ಯುವಕ ತನ್ನ ಫೇಸ್‌ಬುಕ್‌ನಲ್ಲಿ ಪುತ್ತೂರು ಶಾಸಕರ ವಿರುದ್ಧ ಅವಹೇಳನಕಾರಿ ಬರಹವನ್ನು ಹಂಚಿಕೊಂಡಿದ್ದನ್ನು ಕಂಡ ಶಾಸಕರ ಅಭಿಮಾನಿ ಬಳಗದ ಸದಸ್ಯರು, ಸಂಬಂಧಪಟ್ಟವನಿಗೆ ಮೊಬೈಲ್ ಕರೆ ಮಾಡಿ ಬರಹವನ್ನು ಅಳಿಸುವಂತೆ ಸೂಚಿಸಿದರು. ಅವನು ಒಪ್ಪದಿದ್ದಾಗ, ಪುತ್ತೂರಿನಿಂದ ಯುವಕನಲ್ಲಿಗೆ ತೆರಳಿದ ಬಳಗದ ಸದಸ್ಯರು, ಬರಹ ಅಳಿಸುವಂತೆ ಒತ್ತಾಯಿಸಿದರು. ಈ ಸಂದರ್ಭ ಪರಸ್ಪರ ಮಾತಿನ ಚಕಮಕಿ ನಡೆದು, ಜನರೂ ಜಮಾಯಿಸತೊಡಗಿದರು.
ಮಾಹಿತಿ ಅರಿತು ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಪನ್ನು ಚದುರಿಸಿ ಬಳಗದ ಸದಸ್ಯರನ್ನು ಹಾಗೂ ಬರಹ ಪ್ರಕಟಿಸಿದವನನ್ನೂ ಠಾಣೆಗೆ ಕರೆದೊಯ್ದರು. ಠಾಣೆಗೆ ಆಗಮಿಸಿದ ಪುತ್ತೂರು ಡಿವೈಎಸ್ಪಿ ಡಾ. ಗಾನಾ ಪಿ.ಕುಮಾರ್ ವಿಚಾರಣೆ ನಡೆಸಿ ಪ್ರಕರಣ ಇತ್ಯರ್ಥ ಪಡಿಸಿದರು. ಯುವಕ ಬರಹವನ್ನು ಅಳಿಸಿರುವುದಾಗಿ ತಿಳಿದುಬಂದಿದೆ.