ಬೆಂಗಳೂರು: ಕ್ರಿಕೆಟ್ ಬುಕ್ಕಿಯೊಬ್ಬನಿಗೆ ಬೆದರಿಸಿ ಲಕ್ಷಾಂತರ ರೂ. ಪಡೆದುಕೊಂಡಿದ್ದ ಆರೋಪದ ಮೇಲೆ ಸದಾಶಿವನಗರ ಠಾಣೆಯ ಇಬ್ಬರು ಪಿಎಸ್‌ಐ ಹಾಗೂ ಮೂವರು ಕಾನ್ ಸ್ಟೇಬಲ್ ಗಳನ್ನು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ಕರ್ತವ್ಯಲೋಪ ಆರೋಪದ ಮೇಲೆ ಅಮಾನತು ಮಾಡಿದ್ದಾರೆ.
ಸದಾಶಿವನಗರ ಠಾಣೆ ಪಿಎಸ್‌ಎ ಮೋಹನ್, ಬಸವರಾಜು ಮತ್ತು ಕಾನ್ ಸ್ಟೇಬಲ್‌ಗಳಾದ ಠಾಣೆ ವಿಶೇಷ ಘಟಕದ ಶಿವಕುಮಾರ್, ಅಪರಾಧ ವಿಭಾಗದ ಕಾನ್ ಸ್ಟೇಬಲ್‌ಗಳಾದ ಪರಶುರಾಮ್ ಹಾಗೂ ನಾಗರಾಜ್‌ರನ್ನು ಅಮಾನತುಗೊಳಿಸಲಾಗಿದೆ. ಜತೆಗೆ ಐವರ ವಿರುದ್ಧ ಇಲಾಖಾ ತನಿಖೆಗೆ ಆದೇಶ ನೀಡಲಾಗಿದೆ. ಇತ್ತೀಚೆಗೆ ನಡೆದ ಇಂಡಿಯಾ ಮತ್ತು ಪಾಕಿಸ್ತಾನದ ಕ್ರಿಕೆಟ್ ಟೂರ್ನಿಮೆಂಟ್ ನಡೆದಿತ್ತು. ಇದೇ ವೇಳೆ ಸದಾಶಿವನಗರ ಠಾಣೆಯ ಅಧಿಕಾರಿ-ಸಿಬ್ಬಂದಿಗೆ ಮುಕೇಶ್ ಎಂಬ ಬುಕ್ಕಿಯೊಬ್ಬ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದಾನೆ ಎಂಬ ಮಾಹಿತಿ ದೊರಕಿದೆ.
ಕೂಡಲೇ ಇಬ್ಬರು ಪಿಎಸ್‌ಐ ಹಾಗೂ ಮೂವರು ಕಾನ್ ಸ್ಟೇಬಲ್ ಗಳು ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಮುಕೇಶ್ ಎಂಬಾತನ ಮನೆ ಅಥವಾ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಆದರೆ, ಆರೋಪಿ ಮುಕೇಶ್ ನಾಪತ್ತೆಯಾಗಿದ್ದ. ಆಗ ಆತನ ಸ್ನೇಹಿತ ಯೋಗೇಶ್ ಎಂಬವರು ಸ್ಥಳದಲ್ಲಿದ್ದರು. ಆಗ ಯೋಗೇಶ್‌ನನ್ನು ವಿಚಾರಣೆ ನಡೆಸಿದ ಸಿಬ್ಬಂದಿ ಪ್ರಕರಣ ದಾಖಲಿಸಲು ಠಾಣೆಗೆ ಕರೆದೊಯ್ಯುವ ಮಾರ್ಗ ಮಧ್ಯೆ, ಒಂದು ಲಕ್ಷ ರೂ. ಕೊಟ್ಟರೆ ಪ್ರಕರಣದಿಂದ ಕೈಬಿಡುತ್ತೇವೆ. ಇಲ್ಲವಾದರೆ ಪ್ರಕರಣ ದಾಖಲಿಸುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ.
ಹೆದರಿದ ಯೋಗೇಶ್, ಅಧಿಕಾರಿಗಳಿಗೆ ಒಂದು ಲಕ್ಷ ರೂ. ಕೊಟ್ಟಿದ್ದಾರೆ. ಅದರಿಂದ ಬೇಸರಗೊಂಡ ಯೋಗೇಶ್, ಮೂರು ದಿನಗಳ ಬಳಿಕ ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿಗೆ ಲಿಖಿತ ದೂರು ನೀಡಿದ್ದರು. ಈ ಕುರಿತು ಯಲಹಂಕ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಈ ವೇಳೆ ಯಾವುದೇ ಪ್ರಕರಣ ದಾಖಲಿಸದೆ, ಯೋಗೇಶ್ ನನ್ನು ಕರೆದೊಯ್ದಿದ್ದಾರೆ.
ಜತೆಗೆ ಅನುಮಾನದ ಮೇರೆಗೆ ಠಾಣೆಗೆ ಕರೆದೊಯ್ದೆ ಮಾರ್ಗಮಧ್ಯೆಯೇ ಬೆದರಿಸಿ ಹಣ ಪಡೆದು ಕಳುಹಿಸಿದ್ದಾರೆ. ಈ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ವರದಿ ನೀಡಿದ್ದರು. ಈ ವರದಿಯನ್ನು ಪೊಲೀಸ್ ಆಯುಕ್ತರ ಗಮನಕ್ಕೆ ತರಲಾಗಿತ್ತು. ಬಳಿಕ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡಕ್ಕೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಿದ್ದರು. ಹೀಗಾಗಿ ಐವರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಈ ಮಧ್ಯೆ ಯೋಗೇಶ್ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸಿದಾಗ ಆತ ಕ್ರಿಕೆಟ್ ಬುಕ್ಕಿ ಅಲ್ಲ. ಬೇರೆ ವ್ಯವಹಾರ ನಡೆಸುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕರ್ತವ್ಯಲೋಪ ಆರೋಪದ ಮೇಲೆ ಇಬ್ಬರು ಪಿಎಸ್‌ಐ ಹಾಗೂ ಮೂವರು ಕಾನ್ ಸ್ಟೇಬಲ್ ಗಳನ್ನು ಅಮಾನತುಗೊಳಿಸಲಾಗಿತೆ. ಜತೆಗೆ ಐವರ ವಿರುದ್ಧ ಇಲಾಖಾ ತನಿಖೆಗೆ ಆದೇಶ ನೀಡಲಾಗಿದೆ.
– ಶ್ರೀನಿವಾಸಗೌಡ, ಕೇಂದ್ರ ವಿಭಾಗ ಡಿಸಿಪಿ