ಬೆಂಗಳೂರು: ಕಾರ್ಮಿಕ ಕಲ್ಯಾಣ ಮಂಡಳಿಯ ಸೆಸ್‌ನಿಂದ ಸಂಗ್ರಹವಾಗುವ ಹಣವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಕಟ್ಟಡ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ಆರೋಪಿಸಿದೆ.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ ಕೆ.ಮಹಾಂತೇಶ್, 2006ರಲ್ಲಿ ಆರಂಭವಾದ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 5,650 ಕೋಟಿ ರೂ. ಕಾರ್ಮಿಕರ ಹಣ ಸೆಸ್ ರೂಪದಲ್ಲಿ ಸಂಗ್ರಹವಾಗಿದೆ. ಆದರೆ, ಕಾರ್ಮಿಕರಿಗಾಗಿ ಸರ್ಕಾರ ವ್ಯಯಿಸಿರುವುದು ಕೇವಲ 177ಕೋಟಿ ರೂ. ಮಾತ್ರ.
ಈ ಮಧ್ಯೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಈ ಹಣವನ್ನು ಖರ್ಚು ಮಾಡಲು ಅನಗತ್ಯ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ತ್ರಿಪಕ್ಷೀಯ ಸ್ವಾಯತ್ತ ಸಮಿತಿಯಾಗಿದ್ದರೂ, ಯಾವುದೇ ವಿಷಯಗಳನ್ನು ಚರ್ಚಿಸದೇ ಏಕಾಏಕಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ನೊಂದಾಯಿತ ಕಾರ್ಮಿಕರಿಗೆ ನೀಡಲಾಗುತ್ತಿದ್ದ ಮದುವೆ, ಹೆರಿಗೆ ಇತರೆ ಕಲ್ಯಾಣ ಸೌಲಭ್ಯಗಳನ್ನು ನೀಡದಿರಲು ಸಚಿವರು ನಿರ್ಧರಿಸಿದ್ದಾರೆ. ಹೀಗಾಗಿ, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿರುವ ಸಂತೋಷ್ ಲಾಡ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಮಿತಿ ಸದಸ್ಯ ಶಿವಣ್ಣ ಮಾತನಾಡಿ, ಸಂಗ್ರವಾಗಿರುವ ಹಣದ ಪೈಕಿ 264 ಕೋಟಿ ರೂಪಾಯಿ ಅನ್ನು 11 ಲಕ್ಷ ಫಲಾನುಭವಿಗಳಿಗೆ ಸ್ಮಾರ್ಟ್‌ಪೋನ್‌ಗಾಗಿ.
ನೋಂದಣಿಯಾದ ಫಲಾನುಭವಿ ಹಾಗೂ ಅವರ ಮಕ್ಕಳ ಬಸ್‌ಪಾಸ್‌ಗೆ 3,258 ಕೋಟಿ ರೂ., 21ಕೋಟಿ ರೂ. ಏರ್‌ಆ್ಯಂಬ್ಯುಲೆನ್ಸ್‌ಗೆ, ಉದ್ಯೋಗಖಾತ್ರಿ ಕೆಲಸಗಾರರನ್ನು ನೋಂದಾಯಿಸಲು ಕಿಯೋನಿಕ್ಸ್ ಸಂಸ್ಥೆಗೆ 15 ಕೋಟಿ ರೂ.ಗಳಿಗೆ ಗುತ್ತಿಗೆ ಸೇರಿದಂತೆ ಇತರೆ ಅನಗತ್ಯ ಕಾರ್ಯಕ್ರಮಗಳಿಗೆ ಕಾರ್ಮಿಕರ ಸೆಸ್ ಹಣ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯ ಎನ್.ವೀರಸ್ವಾಮಿ, ಕಾಳಪ್ಪ, ಎಂ.ಜಿ.ರಂಗಸ್ವಾಮಿ,ಎಸ್.ಎಸ್.ಪ್ರಕಾಶ್, ಸಿ.ವಿ.ಲೋಕೇಶ್,ಬಿ.ದೇವರಾಜು ಇದ್ದರು.