ಸುಳ್ಯ: ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ಆರೋಪಿಸಿ ಹಾಗೂ ಯುವತಿಯ ಜೊತೆ ಅನ್ಯಮತೀಯ ಯುವಕ ಅನುಚಿತವಾಗಿ ವರ್ತಿಸಿದ ಘಟನೆ ಖಂಡಿಸಿ ಸುಳ್ಯದ ಪೊಲೀಸ್ ಠಾಣೆ ಬಳಿ ಮಾಣಿ – ಮೈಸೂರು ಹೆದ್ದಾರಿಯಲ್ಲಿ ಸೆ.24ರ ಮಂಗಳವಾರ ಹಿಂದೂ ಹಿತ ರಕ್ಷಣಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಆರಂಭದಲ್ಲಿ ಸುಳ್ಯದ ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮೆರವಣಿಗೆ ಮೂಲಕ ಸುಳ್ಯ ಪೊಲೀಸ್ ಠಾಣಾ ಬಳಿಗೆ ಆಗಮಿಸಿದ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಪೊಲೀಸ್ ಠಾಣಾ ಬಳಿಯಲ್ಲೇ ಮಾಣಿ – ಮೈಸೂರು ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಪೊಲೀಸರ ವಿರುದ್ಧ ಹಾಗೂ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಸುಳ್ಯ ಠಾಣಾ ಸಿಬ್ಬಂದಿಯೋರ್ವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಅವರನ್ನು ಅಮಾನತು ಅಥವಾ ಇಲ್ಲಿಂದ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.
ಶಾಸಕಿ ಭಾಗೀರಥಿ ಮುರುಳ್ಯ, ಪ್ರಮುಖರಾದ ಎ.ವಿ.ತೀರ್ಥರಾಮ, ಹರೀಶ್ ಕಂಜಿಪಿಲಿ, ನವೀನ್ ನೆರಿಯ ಮತ್ತಿತರರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಪುತ್ತೂರು ಉಪವಿಭಾಗ ಡಿವೈಎಸ್ಪಿ ಡಾ.ಅರುಣ್ ನಾಗೇಗೌಡ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ನಾವು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿದ್ದೇವೆ. ತಮ್ಮ ಬೇಡಿಕೆಗಳ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.
ಸುಳ್ಯ, ಸುಬ್ರಹ್ಮಣ್ಯ, ಬೆಳ್ಳಾರೆ, ಕಡಬ, ಪುತ್ತೂರು ಪೊಲೀಸ್ ಠಾಣಾ ಎಸೈಗಳ ನೇತೃತ್ವದ ಪೊಲೀಸರು ಹಾಗೂ ಹೆಚ್ಚುವರಿ ಕೆ.ಎಸ್.ಆರ್.ಪಿ. ಪೊಲೀಸರ ನಿಯೋಜಿಸಿ ಬಂದೋ ಬಸ್ತ್ ಮಾಡಲಾಗಿತ್ತು. ಬಳಿಕ ಪ್ರಮುಖರು ಠಾಣೆಯಲ್ಲಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಪ್ರತಿಭಟನೆಯಿಂದ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.