ಹೊನ್ನಾಳಿ: ಸಂತ ಸೇವಾಲಾಲರ ಭಕ್ತನೊಬ್ಬನ ಮೇಲೆ ಪೊಲೀಸ್ ಪೇದೆಯೊಬ್ಬರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಸಾವಿರಾರು ಸೇವಾಲಾಲ್ ಭಕ್ತರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಬುಧವಾರ ನಡೆದಿದೆ. ಕಲ್ಲು ತೂರಾಟದಿಂದ ಠಾಣೆಯ ಕಿಟಕಿ ಗಾಜುಗಳು ಪುಡಿಯಾಗಿದ್ದಲ್ಲದೆ, ಓರ್ವ ಸಬ್ ಇನ್ಸ್‌ಪೆಕ್ಟರ್, ಇಬ್ಬರು ಪೊಲೀಸರು ಹಾಗೂ ಸಾರ್ವಜನಿಕರಿಬ್ಬರು ಗಾಯಗೊಂಡಿದ್ದಾರೆ.
ಠಾಣೆಯೆದುರು ಜಮಾಯಿಸಿ ಕಲ್ಲು ತೂರಾಟ ನಡೆಸಿದ ಸಾವಿರಾರು ಮಂದಿಯನ್ನು ಪೊಲೀಸರು ಅಶ್ರುವಾಯು ಸಿಡಿಸಿ ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಸೇವಾಲಾಲ್ ಜನ್ಮ ಸ್ಥಳವಾದ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ನಡೆದ ಸೇವಾಲಾಲ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರು ಹೊನ್ನಾಳಿ ಪಟ್ಟಣದ ಮೂಲಕ ತೆರಳುವ ಸಂದರ್ಭದಲ್ಲಿ ಈ ಘಟನೆ ಜರುಗಿದೆ.
ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಬಳಿ ಭಕ್ತರು ಟ್ರ್ಯಾಕ್ಟರ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್ ಚಾಲಕ ಹಾಗೂ ಪೊಲೀಸ್ ಪೇದೆಯೊಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದು ವಿಕೋಪಕ್ಕೆ ತಿರುಗಿದೆ. ಸೇವಾಲಾಲರ ಭಕ್ತರ ಮೇಲೆ ಪೊಲೀಸ್ ಹಲ್ಲೆ ನಡೆದಿದೆ ಎಂದು ಸುದ್ದಿ ಹರಡುತ್ತಿದಂತೆ ಠಾಣೆ ಎದುರು ಸಾವಿರಾರು ಮಂದಿ ಸೇರಿದ್ದಾರೆ. ಹಲ್ಲೆ ಮಾಡಿದ ಪೊಲೀಸ್ ಪೇದೆಯನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿ ಧರಣಿ ನಡೆಸಿದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಧಿಕಾರಿ ಭೀಮಾಶಂಕರ್ ಗುಳೇದ್, ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ, ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತು ಬಂಜಾರಾ ಸಮಾಜದ ಮುಖಂಡರು ಆಗಮಿಸಿ ಶಾಂತಿ ಕಾಪಾಡಲು ಮನವಿ ಮಾಡಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಧರಣಿ ಮುಂದುವರಿಸಿ ಠಾಣೆಗೆ ನುಗ್ಗಲು ಯತ್ನಿಸಿದಾಗ ಗುಂಪು ಚದುರಿಸಲು ಅಶ್ರುವಾಯು ಸಿಡಿಸಲಾಯಿತು.
ಸೇವೆಯಿಂದ ತೆಗೆದು ಹಾಕಲು ಕಾನೂನು ಇಲ್ಲ. ಇದರ ಬಗ್ಗೆ ತನಿಖೆ ಮಾಡಲಾಗುವುದು ಪೊಲೀಸ್ ಪೇದೆಯನ್ನು ಸದ್ಯಕ್ಕೆ ಅಮಾನತು ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಧಿಕಾರಿಗಳು, ಆದೇಶದ ಪ್ರತಿಯನ್ನು ಧರಣಿ ನಿರತರಿಗೆ ತೋರಿಸಿದಾಗ ಧರಣಿ ವಾಪಾಸ್ ಪಡೆದು ಪ್ರತಿಭಟನಾಕಾರರು ತಮ್ಮ ಗ್ರಾಮಗಳಿಗೆ ತೆರಳಿದರು. ಘಟನೆಯಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ.
ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದವರ ಮೇಲೆ ದೂರು ದಾಖಲು ಮಾಡಲಾಗುವುದು ಹಾಗೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಧಿಕಾರಿ ಭೀಮಾಶಂಕರ್ ತಿಳಿಸಿದರು. ಐಜಿಪಿ ಎಂ.ಎ.ಸಲೀಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿವಮೊಗ್ಗ, ದಾವಣಗೆರೆಯಿಂದ ಮುಂಜಾಗ್ರತ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ಕರೆಸಲಾಗಿತ್ತು.