Advertisement

ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ : ವೈದ್ಯರಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ ನ್ಯಾಯಾಲಯ

10:39 PM Jan 04, 2022 | Team Udayavani |

ಬೀದರ್ : ಗರ್ಭಕೋಶದ ಚಿಕಿತ್ಸೆಯಲ್ಲಿ ನಿರ್ಲಕ್ಷ ವಹಿಸಿ ಮಹಿಳೆ ಸಾವಿಗೆ ತಪ್ಪಿತಸ್ಥರಾಗಿರುವುದು ದೃಢಪಟ್ಟ ಹಿನ್ನಲೆ ಜಿಲ್ಲಾ ನ್ಯಾಯಾಲಯ ಮೂವರು ವೈದ್ಯರು ಮತ್ತು ಒರ್ವ ಸಹಾಯಕನಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

Advertisement

ನಗರದ ಬಿರಾದಾರ ಸುಶ್ರೂತ ನರ್ಸಿಂಗ್ ಹೋಮ್‌ನ ವೈದ್ಯರಾದ ಡಾ. ರಾಜಶ್ರೀ ಶಿವರಾಜ, ಡಾ. ವೈಜಿನಾಥ ಬಿರಾದಾರ ಮತ್ತು ಸಹಾಯಕ ಸಾಯಿಬಣ್ಣ ಅಂಬಾಟೆ ಅವರಿಗೆ ಕಲಂ 304 (ಎ) ಜತೆ 34 ಐಪಿಸಿ ಅಪರಾಧಕ್ಕೆ 2 ವರ್ಷ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ, ದಂಡ ಕೊಡದೇ ಇದ್ದಲ್ಲಿ 6 ತಿಂಗಳು ಸಾದಾ ಕಾರಗೃಹ  ಶಿಕ್ಷೆ ಹಾಗೂ ಡಾ. ರಾಜಶೇಖರ ಪಾಟೀಲ ಅವರಿಗೆ ಕಲಂ 202 ಜತೆ 34 ಐಪಿಸಿ ಅಪರಾಧಕ್ಕೆ 6 ತಿಂಗಳು ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ, ದಂಡ ಕೊಡದೇ ಇದ್ದಲ್ಲಿ ಒಂದು ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ 2ನೇ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.

ಪ್ರಕರಣದ ವಿವರ: ಕಳೆದ 2014ರ ಡಿ. 12ರಂದು ಸಂಪಾವತಿ ಘಾಳೆಪ್ಪ ಔರಾದಕರ್ ಎಂಬ ಮಹಿಳೆಯನ್ನು ಗರ್ಭಕೋಶದ ಚಿಕಿತ್ಸೆಗಾಗಿ ನ್ಯೂಟೌನ್ ಪೊಲೀಸ ಠಾಣೆ ವ್ಯಾಪ್ತಿಯ ಬಿರಾದಾರ ನರ್ಸಿಂಗ್ ಹೋಮ್‌ನಲ್ಲಿ ದಾಖಲು ಮಾಡಲಾಗಿತ್ತು. ಆಸ್ಪತ್ರೆಯ ವೈದ್ಯರಾದ ಡಾ. ರಾಜಶ್ರೀ, ಡಾ. ವೈಜಿನಾಥ ಮತ್ತು ಸಾಯಿಬಣ್ಣ ಅವರು 5 ಗಂಟೆ ಕಾಲ ಸಂಪಾವತಿಗೆ ಚಿಕಿತ್ಸೆ ನೀಡಿ ನಂತರ ಅವರ ಆರೋಗ್ಯದ ಬಗ್ಗೆ ಮಾಹಿತಿ ಕೊಡದೇ ರಾತ್ರಿ ಬೀದರನ ಡಾ. ರಾಜಶೇಖರ ಪಾಟೀಲ ಅವರ ಆಸ್ಪತ್ರೆಗೆ ವರ್ಗಾಯಿಸಿದ್ದರು. ಈ ಬಗ್ಗೆ ವೈದ್ಯರಿಗೆ ವಿಚಾರದರೆ ಈ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೌಲಭ್ಯ ಇರುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕುರುಗೋಡು : ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಒದಗಿಸಲು ಅಧಿಕಾರಿಗಳಿಗೆ ಮನವಿ

ಬಿರಾದಾರ ಆಸ್ಪತ್ರೆಯಲ್ಲಿ ಮೇಜರ್ ಚಿಕಿತ್ಸೆ ಮಾಡುವಾಗ ವೆಂಟಿಲೇಟರ್ ವ್ಯವಸ್ಥೆ ಇಡಲಾರದೇ ಈ ವೈದ್ಯರು ಸಂಪಾವತಿಗೆ ಗರ್ಭಕೋಶದ ಚಿಕಿತ್ಸೆ ಮಾಡಿದ್ದು, ರೋಗಿ ಮೃತಪಟ್ಟಿದ್ದರು. ಇದಕ್ಕೆ ವೈದ್ಯರ ನಿರ್ಲಕ್ಷ ಕಾರಣವೆಂದು ಹಾಗೂ ಸಂಪಾವತಿ ಮೃತಪಟ್ಟಿದ್ದರೂ ಡಾ. ರಾಜಶೇಖರ ಪಾಟೀಲ ಅವರು ಬಿರಾದಾರ ಆಸ್ಪತ್ರೆಯ ವೈದ್ಯರ ಜೊತೆ ಶಾಮೀಲಾಗಿ ಚಿಕಿತ್ಸೆ ಮುಂದುವರೆಸಿರುತ್ತಾರೆ ಎಂದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ.

Advertisement

ಹಾಗಾಗಿ ಮೂರು ವೈದ್ಯರು ಮತ್ತು ಸಹಾಯಕನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಅಬ್ದುಲ್ ಖಾದರ್ ಅವರು ಆರೋಪಿತರೆಂದು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಅಭಿಯೋಜಕ ಶರಣಗೌಡ ಮತ್ತು ಸಹಾಯಕ ಸರ್ಕಾರಿ ಅಭಿಯೋಜಕ ಸುನೀಲ ಕಾಂಬಳೆ ಅವರು ಅಭಿಯೋಜನಾ ಪರವಾಗಿ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next