Advertisement

ಬಿಸ್ಕೆಟ್‌ ವ್ಯವಹಾರಕ್ಕೆಂದು ಕೋಟಿಗಟ್ಟಲೆ ಸಾಲ ಪಡೆದು ಕ್ಯಾಸಿನೋ ಜೂಜಾಟ ಆಡಿದ ಆರೋಪಿ ಅರೆಸ್ಟ್

01:36 PM May 25, 2022 | Team Udayavani |

ಬೆಂಗಳೂರು: ಬಿಸ್ಕೆಟ್‌ ವ್ಯವಹಾರ ಮಾಡುತ್ತೇನೆ ಎಂದು ನಂಬಿಸಿ ಸ್ನೇಹಿತರು, ಪರಿಚಯಸ್ಥರಿಂದ ಕೋಟಿಗೂ ಅಧಿಕ ಸಾಲ ಪಡೆದು ತಲೆಮರೆಸಿಕೊಂಡಿದ್ದ ಆರೋಪಿ ಕೆಂಪೇಗೌಡನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ನಂಜಾಂಭ ಅಗ್ರಹಾರ ನಿವಾಸಿ ಮನೋಜ್‌ ರಾವ್‌ (29) ಬಂಧಿತ. ಎಂ.ಕಾಂ ಪದವೀಧರನಾಗಿರುವ ಮನೋಜ್‌ರಾವ್‌ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಬದಲಿಗೆ ಆನ್‌ಲೈನ್‌ ಬೆಟ್ಟಿಂಗ್‌, ಕ್ರಿಕೆಟ್‌ ಬೆಟ್ಟಿಂಗ್‌ ಹಾಗೂ ಕ್ಯಾಸಿನೋ ಜೂಜಾಟ ಅಭ್ಯಾಸ ಮಾಡಿಕೊಂಡಿದ್ದ. ಈ ಮಧ್ಯೆ ತನ್ನ ಚಟಗಳಿಗೆ ಹಣ ಹೊಂದಿಸಲು ಕಷ್ಟವಾಗಿದ್ದು, ಅದರಿಂದ ವಂಚನೆ ದಾರಿ ಹಿಡಿದಿದ್ದ ಎಂದು ಪೊಲೀಸರು ಹೇಳಿದರು.

ಕೋಟಿ ರೂ.ಹೆಚ್ಚು ಸಾಲ: ಪರಿಚಯಸ್ಥರು, ಸ್ನೇಹಿತರಿಗೆ ಬಿಸ್ಕೆಟ್‌ ವ್ಯವಹಾರ ಮಾಡುತ್ತೇನೆ. ಆದರೆ, ಒಂದಿಷ್ಟು ಹಣ ಬೇಕಾಗಿದೆ. ಸಾಲದ ರೂಪದಲ್ಲಿ ನೀಡಿದರೆ ವಾಪಸ್‌ ಕೊಡುವುದಾಗಿ ನಂಬಿಸಿದ್ದಾನೆ.

ಅಲ್ಲದೆ, ಕೆಲವರಿಗೆ ವ್ಯವಹಾರದಲ್ಲಿ ಪಾಲುದಾರಿಕೆ ನೀಡುವುದಾಗಿ, ಲಾಭಾಂಶ ಕೊಡುತ್ತೇನೆಂದು ನಂಬಿಸಿದ್ದಾನೆ. ಕುಮುದಾ ಎಂಬುವವರಿಂದ ಬರೋಬ್ಬರಿ 21 ಲಕ್ಷ ರೂ. ಮತ್ತು ನಾಗೇಶ್‌ರಾವ್‌ ಬಳಿ 11.50 ಲಕ್ಷ ರೂ. ಸಾಲ ಪಡೆದುಕೊಂಡಿದ್ದು, ಆರೋಪಿಯಿಂದ ಚೆಕ್‌ ಪಡೆದುಕೊಂಡಿದ್ದರು.

ನಿಗದಿತ ಸಮಯದಲ್ಲಿ ಹಣನೀಡದ್ದರಿಂದ ಬ್ಯಾಂಕ್‌ಗೆ ಚೆಕ್‌ ಹಾಕಿದ್ದಾರೆ. ಚೆಕ್‌ ಬೌನ್ಸ್‌ಆಗಿದೆ. ಹೀಗಾಗಿ ಆರೋಪಿಗೆ ಹಣ ವಾಪಸ್‌ ಕೊಡುವಂತೆ ದುಂಬಾಲು ಬಿದ್ದಿದ್ದಾರೆ. ಅದಕ್ಕೆ ಆರೋಪಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಕುಮುದಾ ಮತ್ತು ನಾಗೇಶ್‌ರಾವ್‌ ಕೆಂಪೇಗೌಡನಗರ ಠಾಣೆಯಲ್ಲಿ ವಂಚನೆ ಹಾಗೂ ಚೆಕ್‌ ಬೌನ್ಸ್‌ ಪ್ರಕರಣ ದಾಖಲಿಸಿದ್ದರು.

Advertisement

ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಈ ಬೆನ್ನಲ್ಲೇ ಸುಮಾರು 6 ಮಂದಿ ಆರೋಪಿಯ ವಿರುದ್ಧ ಪ್ರತ್ಯೇಕ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಸ್ನೇಹಿತರು, ಸಂಬಂಧಿಕರಿಂದ ಪಡೆದುಕೊಂಡಿದ್ದ ಸಾಲವನ್ನು ಆರೋಪಿ ಗೋವಾದಲ್ಲಿ ನಡೆಯುವ ಕ್ಯಾಸಿನೋಗೆ ಹೋಗಿ ಲಕ್ಷಾಂತರ ರೂ. ಹೂಡಿಕೆ ಮಾಡಿ ಸೋತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next