ಬೆಂಗಳೂರು: ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು ಸಂಘಟನೆಯ ಕಾರ್ಯಕರ್ತರು ಬ್ರಿಗೇಡ್ ರಸ್ತೆಯ ಪಬ್‌ವೊಂದಕ್ಕೆ ನುಗ್ಗಿ ನೈತಿಕ ಪೊಲೀಸ್‌ಗಿರಿ ಮಾಡಿರುವ ಆರೋಪ ಕೇಳಿ ಬಂದಿದ್ದು, ಇದರ ಬೆನ್ನಲ್ಲೇ ಅಶೋಕ್‌ನಗರ ಠಾಣೆ ಪೊಲೀಸರು ಸಂಘಟನೆಯ 8 ಮಂದಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು ಸಂಘಟನೆಯ ರವಿ ಬೈಂದೂರು, ನಟರಾಜ್ ಸೇರಿ 8 ಮಂದಿಯನ್ನು ವಿಚಾರಣೆ ನಡೆಸಲಾಗುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಘಟನೆಯ 10ಕ್ಕೂ ಅಧಿಕ ಕಾರ್ಯಕರ್ತರು ಬ್ರಿಗೇಡ್ ರಸ್ತೆಯ ಪಬ್‌ಗ ಏಕಾಏಕಿ ನುಗ್ಗಲು ಯತ್ನಿಸಿದಾಗ ಪಬ್ ಬೌನ್ಸರ್‌ಗಳು ಇವರನ್ನು ತಡೆದಿದ್ದರು. ನಂತರ ಬೌನ್ಸರ್ ಹಾಗೂ ಸಂಘಟನೆಯವರ ನಡುವೆ ವಾಗ್ವಾದ ನಡೆದಿತ್ತು. ರೊಚ್ಚಿಗೆದ್ದ ಕಾರ್ಯಕರ್ತರು ನಡುರಸ್ತೆಯಲ್ಲೇ ಬೌನ್ಸರ್ ಗಳ ಜೊತೆಗೆ ಬಡಿದಾಡಿಕೊಂಡಿದ್ದಾರೆ. ಡೋಲು ಬಡಿದುಕೊಂಡು ಪಬ್ ಮೇಲೆ ದಾಳಿಗೆ ಮುಂದಾಗಿದ್ದರು ಎಂಬ ಆರೋಪ ಕೇಳಿ ಬಂದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಅಶೋಕನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.