ಬೆಂಗಳೂರು: ಎಟಿಎಂ ಕೇಂದ್ರಗಳಿಗೆ ಬರುವ ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸಿ ವಂಚಿಸುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಶಿಕುಮಾರ್ (48) ಬಂಧಿತ ಆರೋಪಿ. ಆಟೋ ಚಾಲಕನಾಗಿದ್ದ ಆರೋಪಿ ಆನ್‌ಲೈನ್ ಗೇಮ್ಸ್, ಜೂಜು, ಮೋಜಿನ ಜೀವನ ಮಾಡುತ್ತಿದ್ದ. ಅದಕ್ಕಾಗಿ ಎಟಿಎಂ ಕೇಂದ್ರದ ಬಳಿ ಬರುವ ಕೆಲ ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ಎಂದು ಪೊಲೀಸರು ಹೇಳಿದರು.
ಹಣ ವಿತ್ ಡ್ರಾ ಮಾಡಲು ಬರುವ ವೃದ್ಧರು, ಅನಕ್ಷರಸ್ಥರಿಗೆ ಸಹಾಯ ಮಾಡುವ ನೆಪದಲ್ಲಿ ಆರೋಪಿ, ಗ್ರಾಹಕರ ಡೆಬಿಟ್ ಕಾರ್ಡಿನ ಪಿನ್ ನಂಬರ್ ತಿಳಿದುಕೊಳ್ಳುತ್ತಿದ್ದ. ಬಳಿಕ ತನ್ನ ಬಳಿಯಿರುವ ಬೇರೆ ಎಟಿಎಂ ಕಾರ್ಡ್ ನೀಡಿ, ತಾಂತ್ರಿಕ ಸಮಸ್ಯೆಯಿಂದ ಹಣ ವಿತ್ ಡ್ರಾ ಆಗುತ್ತಿಲ್ಲ’ ಎಂದು ಹೇಳಿ ವಾಪಸ್ ಕಳುಹಿ ಸುತ್ತಿದ್ದ. ವಂಚಿಸಿದ ಡೆಬಿಟ್ ಕಾರ್ಡ್ ಅನ್ನು ಬಳಸಿ ಚಿನ್ನಾಭರಣ ಖರೀದಿಸಿ, ಅದನ್ನ ಬೇರೆಡೆ ಅಡವಿಡುತ್ತಿದ್ದ. ಬಂದ ಹಣದಲ್ಲಿ ಕುದುರೆ ರೇಸ್, ಆನ್‌ಲೈನ್ ಗೇಮ್ಸ್ ಸೇರಿ ಜೂಜಾಟ ಆಡುವ ಮೂಲಕ ಹಣ ಕಳೆಯುತ್ತಿದ್ದ. ಆರೋಪಿ ಇತ್ತೀಚೆಗೆ ವೃದ್ಧರೊಬ್ಬರಿಗೆ 16 ಲಕ್ಷ ರೂ. ವಂಚಿಸಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಈತ ಈ ಹಿಂದೆ ವಿದ್ಯಾರಣ್ಯಪುರ ಮತ್ತು ಹುಳಿಮಾವು, ಉಪಾರಪೇಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ವಿವಿಧ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್‌ಶೆಟ್ಟಿ ಹೇಳಿದ್ದಾರೆ.