ಬೆಂಗಳೂರು: ಗರ್ಭಿಣಿ ಪತ್ನಿಯನ್ನು ಕೊಂದು ವಿಮಾನದಲ್ಲಿ ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಸುದ್ದು ಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ತಾವರೆಕೆರೆಯ ಸುಭಾಷ್‌ನಗರ ನಿವಾಸಿ ನಾಸೀರ್ ಹುಸೇನ್ (34) ಬಂಧಿತ.
ಆರೋಪಿ ಜ.15ರಂದು ಪತ್ನಿ ನಜ್ಮಾಖಾನ್‌ರನ್ನು ಉಸಿರುಗಟ್ಟಿಸಿ ಕೊಲೆಗೈದು ಪರಾರಿಯಾಗಿದ್ದ. ಇದೀಗ ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿ ದೆಹಲಿಯಲ್ಲಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆ ತಂದಿದ್ದಾರೆ. ಪಶ್ಚಿಮ ಬಂಗಾಳ ಮೂಲದ ನಾಸೀರ್ ಹುಸೇನ್ ಐದಾರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಎಲೆಕ್ಟ್ರಾನಿಕ್ ಸಿಟಿ ಸಮೀಪದ ಸುಭಾಷ್‌ನಗರದಲ್ಲಿ ವಾಸವಾಗಿದ್ದ. ಖಾಸಗಿ ಕಂಪನಿಯಲ್ಲಿ ಲ್ಯಾಪ್‌ಟಾಪ್ ರಿಪೇರಿ ಕೆಲಸ ಮಾಡುತ್ತಿದ್ದ. ಜತೆಗೆ ಸುಭಾಷ್‌ನಗರದಲ್ಲಿ ಸಣ್ಣ ಕೊಠಡಿಯಲ್ಲಿಯೂ ಖಾಸಗಿಯಾಗಿ ಲ್ಯಾಪ್‌ಟಾಪ್ ರಿಪೇರಿ ಮಾಡುತ್ತಿದ್ದ. ಇದೇ ವೇಳೆ ಕೊಠಡಿಯ ಮನೆ ಮುಂದೆ ವಾಸವಾಗಿದ್ದ ನಜ್ಮಾ ಖಾನ್‌ರನ್ನು ಪ್ರೀತಿಸಿದ್ದು, ಆರು ತಿಂಗಳ ಹಿಂದೆ ಹಿರಿಯ ಸಮ್ಮುಖದಲ್ಲಿ ಮದುವೆಯಾಗಿದ್ದರು. ಸುಭಾಷ್‌ನಗರದಲ್ಲೇ ದಂಪತಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಈ ಮಧ್ಯೆ 4 ತಿಂಗಳಿಂದ “ನಿನ್ನ ಸಹೋದರಿ ಪತಿ ಜತೆ ಅಕ್ರಮ ಸಂಬಂಧ ಹೊಂದಿದ್ದಿಯಾ?’ ಎಂದು ನಿತ್ಯ ಜಗಳ ನಡೆಸುತ್ತಿದ್ದ. ಹೀಗಾಗಿ ಒಂದು ತಿಂಗಳ ಹಿಂದಷ್ಟೇ ಸುದ್ದು ಗುಂಟೆಪಾಳ್ಯ ಠಾಣೆ ವ್ಯಾಪ್ತಿ ತಾವರೆಕೆರೆ ಮುಖ್ಯರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಆದರೂ ಪತ್ನಿ ಮೇಲೆ ನಿತ್ಯ ಹಲ್ಲೆ ನಡೆಸುತ್ತಿದ್ದ. ಇತ್ತೀಚೆಗಷ್ಟೇ ಆಕೆ ಗರ್ಭಿಣಿಯಗಿದ್ದಳು ಎಂದು ಹೇಳಲಾಗಿದೆ. ಅದಕ್ಕೆ “ನಾನು ಕಾರಣನಲ್ಲ. ನೀನು ಬೇರೆಯೊಬ್ಬರ ಜತೆ ಅಕ್ರಮ ಸಂಬಂಧ ಹೊಂದಿರುವೆ’ ಎಂದು ಆರೋಪಿ ಹಲ್ಲೆ ನಡೆಸಿದ್ದಾನೆ. ಭಾನುವಾರ ರಾತ್ರಿಯೂ ಜಗಳ ತೆಗೆದಿದ್ದು, ಕುತ್ತಿಗೆ ಹಿಸುಕಿ ಮತ್ತು ಉಸಿರುಗಟ್ಟಿಸಿ ಕೊಲೆಗೈದು, ರಾತ್ರಿ 10 ಗಂಟೆ ಸುಮಾರಿಗೆ ವಾಟ್ಸ್‌ಆ್ಯಪ್‌ನಲ್ಲಿ ಭಾಮೈದನಿಗೆ “ನಿನ್ನ ಸಹೋದರಿಯನ್ನು ಫ್ಲ್ಯಾಟ್‌ನಲ್ಲಿ ಕೊಲೆಗೈದಿದ್ದೇನೆ. ಎಂದು ಮೆಸೇಜ್ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.
ಕೃತ್ಯಕ್ಕೂ ಮೊದಲೇ ವಿಮಾನ ಟಿಕೆಟ್ : ಪತ್ನಿ ಕೊಲೆಗೈಯಲು ಮೊದಲೇ ಸಂಚು ರೂಪಿಸಿದ್ದ ಆರೋಪಿ, ದೆಹಲಿ ಮಾರ್ಗವಾಗಿ ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಲು ವಿಮಾನ ಟಿಕೆಟ್ ಕಾಯ್ದಿರಿಸಿದ್ದ. ನಂತರ ಟ್ಯಾಕ್ಸಿ ಚಾಲಕನಿಗೆ 4000 ರೂ. ಫೋನ್ ಪೇ ಮಾಡಿದ್ದ. ಪೊಲೀಸರು ತನ್ನ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದ, ಪಶ್ಚಿಮ ಬಂಗಾಳದಿಂದ ದೆಹಲಿಗೆ ಪರಾರಿಯಾಗುತ್ತಿದ್ದ. ಈ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ದೆಹಲಿ ಏರ್‌ಪೋರ್ಟ್‌ನಲ್ಲಿ ಬಂಧಿಸಿದ್ದಾರೆ.