ಮಡಿಕೇರಿ: ಅಕ್ರಮವಾಗಿ ಜಿಂಕೆ ಚರ್ಮವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನು ಮಡಿಕೇರಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕ ಬಂಧಿಸಿದೆ. ಆರೋಪಿ ಬಳಿಯಿಂದ ಒಂದು ಜಿಂಕೆ ಚರ್ಮವನ್ನು ವಶಕ್ಕೆ ಪಡೆಯಲಾಗಿದೆ.
ನಗರದ ಸಿದ್ದಾಪುರ ರಸ್ತೆಯಲ್ಲಿರುವ ಬಸ್ ತಂಗುದಾಣದ ಬಳಿ ಜಿಂಕೆ ಚರ್ಮ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದರು. ನಂಜನಗೂಡು ಮೂಲದ ವೆಂಕಟೇಶ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.
ಸಿಐಡಿ ಪೊಲೀಸ್ ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ.ಶರತ್‌ಚಂದ್ರ ನಿರ್ದೇಶನದ ಮೇರೆಗೆ ಮಡಿಕೇರಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಕೆ.ಬಿ ವಿಶ್ವನಾಥ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿ.ಎಸ್.ಐ ಸಿ.ಯು.ಸವಿ ಹೆಡ್‌ಕಾನ್ಸ್ಟೇಬಲ್‌ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್, ಮೋಹನ ಹಾಗೂ ಕಾನ್ಸ್‌ಟೇಬಲ್ ಸ್ವಾಮಿ, ಮಂಜುನಾಥ ಅವರುಗಳು ಪಾಲ್ಗೊಂಡಿದ್ದರು.