ಬೆಂಗಳೂರು: ಮಾಲೀಕನ 75 ಲಕ್ಷ ರೂ. ಹಾಗೂ ಕಾರಿನೊಂದಿಗೆ ಪರಾರಿಯಾಗಿದ್ದ ಚಾಲಕ ಕೊನೆಗೂ ಬ್ಯಾಟರಾಯನಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಹೊಸಕೋಟೆಯ ಸಂತೋಷ್ ಕುಮಾರ್ (28) ಬಂಧಿತ. ಈತನಿಂದ 72 ಲಕ್ಷ ರೂ. ನಗದು ಹಾಗೂ ಫೋರ್ಡ್ ಎಂಡೋವರ್ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಹಣ ಕಪ್ಪು ಹಣವಾಗಿದ್ದು, ಇದನ್ನು ಕದ್ದರೆ ಮಾಲೀಕರು ದೂರು ನೀಡುವುದಿಲ್ಲ ಎಂದು ಭಾವಿಸಿ ಈ ಕೃತ್ಯ ಎಸಗಿದ್ದಾನೆ. ಹುಸ್ಕೂರು ನಿವಾಸಿ ಉದ್ಯಮಿ ಹರೀಶ್ (29) ಅವರು 8 ತಿಂಗಳ ಹಿಂದೆ ಆರೋಪಿ ಸಂತೋಷ್ ಕುಮಾರ್‌ನನ್ನು ತಮ್ಮ ಕಾರಿನ ಚಾಲಕನನ್ನಾಗಿ ನೇಮಿಸಿಕೊಂಡಿದ್ದರು. ಅ.19ರಂದು ರಾತ್ರಿ 9 ಗಂಟೆಗೆ ಮನೆಯಿಂದ ಮೈಸೂರು ರಸ್ತೆಯ ಕುಂಬಳಗೋಡು ಬಳಿಯಿರುವ ರೆಸಾರ್ಟ್‌ಗೆ ಕಾರಿನಲ್ಲಿ ಚಾಲಕ ಸಂತೋಷ್ ಜತೆಗೆ ಹೋಗಿ ಪಾರ್ಟಿ ಮಾಡಿದ್ದರು. ಕೆಲ ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ಪ್ಲ್ರಾಟ್ ಮಾರಾಟ ಮಾಡಿ ಬಂದ 75 ಲಕ್ಷ ರೂ. ಅನ್ನು ಕಾರಿನಲ್ಲಿ ಇಟ್ಟಿದ್ದರು. ಈ ವಿಚಾರ ಸಂತೋಷ್ ಗಮನಕ್ಕೆ ಬಂದಿತ್ತು. ನಂತರ ರಾತ್ರಿ 12 ಗಂಟೆಗೆ ಪಾರ್ಟಿ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದಾಗ ಮಾರ್ಗ ಮಧ್ಯೆ ಸೆಟಲೈಟ್ ಬಸ್ ನಿಲ್ದಾಣದ ಬಳಿ ಕಾರು ನಿಲ್ಲಿಸುವಂತೆ ಸೂಚಿಸಿ ಸಿಗರೆಟ್ ತೆಗೆದುಕೊಂಡು ಬರಲು ಅಂಗಡಿಗೆ ಹೋಗಿದ್ದರು. ಹರೀಶ್ ಸಿಗರೆಟ್ ತೆಗೆದುಕೊಂಡು ವಾಪಸ್ ಬಂದಾಗ ಕಾರು ಇರಲಿಲ್ಲ. ಚಾಲಕ ಸಂತೋಷ್‌ಗೆ ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಆಗ ಸಂತೋಷ್ 75 ಲಕ್ಷ ರೂ. ಹಣ ಲಪಟಾಯಿಸಿರುವುದು ಹರೀಶ್ ಗಮನಕ್ಕೆ ಬಂದಿತ್ತು.
ಕಪ್ಪುಹಣ ಎಂದು ಭಾವಿಸಿದ್ದ ಆರೋಪಿ: ಹರೀಶ್ ಕಾರಿನಲ್ಲಿ 75 ಲಕ್ಷ ರೂ. ನಗದು ಇಟ್ಟಿರುವುದನ್ನು ಗಮನಿಸಿದ್ದೆ. ಇದು ಕಪ್ಪು ಹಣ ಇರಬಹುದು ಎಂದು ಭಾವಿಸಿ ಕಳ್ಳತನ ಮಾಡಿದ್ದೆ. ಹೀಗಾಗಿ ನನ್ನ ವಿರುದ್ಧ ಪೊಲೀಸರಿಗೆ ದೂರು ಕೊಡುವುದಿಲ್ಲ ಎಂದು ಭಾವಿಸಿದ್ದೆ. ಮೊದಲೇ ಸಂಚು ರೂಪಿಸಿ ಕೃತ್ಯ ಎಸಗಿರುವುದಾಗಿ ಆರೋಪಿ ಸಂತೋಷ್ ವಿಚಾರಣೆ ವೇಳೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಆರೋಪಿ ಸಿಕ್ಕಿ ಬಿದ್ದಿದ್ದು ಹೇಗೆ?: ಉದ್ಯಮಿ ಹರೀಶ್ ಅ.20ರಂದು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಎಲ್ಲೆಡೆ ಶೋಧ ನಡೆಸಿದ್ದರು. ಸಂತೋಷ್ ಕುಟುಂಬಸ್ಥರಿಗೆ ಬರುವ ಮೊಬೈಲ್ ಕರೆಗಳ ಮೇಲೆ ನಿಗಾ ಇಟ್ಟಿದ್ದರು. ಸಂತೋಷ್ ಬೇರೆ ನಂಬರ್‌ನಿಂದ ಕುಟುಂಬಸ್ಥರಿಗೆ ವಾಟ್ಸ್‌ಆ್ಯಪ್ ಕರೆ ಮಾಡಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ ಆರೋಪಿ ಹೊಸಕೋಟೆಯಲ್ಲಿ ತಲೆಮರೆಸಿಕೊಂಡಿರುವುದು ಪತ್ತೆಯಾಗಿತ್ತು. ಕೂಡಲೇ ಆತನನ್ನು ಬಂಧಿಸಿದ್ದಾರೆ.