Advertisement

ಉಳಿದವರ ಪ್ರಕಾರ ಒಂದು ಘಟನೆ…ಎಲ್ಲರೂ ಕಂಡಂತೆ

06:00 AM Nov 10, 2017 | Harsha Rao |

ನಾಲ್ಕು ಪ್ರಮುಖ ಪಾತ್ರ. ನಾಲ್ಕು ಕಥೆ. ಒಂದು ನಾಯಿ. ಒಂದು ಘಟನೆ, ಒಂದು ಕ್ರೈಮು…!
– ಇದು ನಿರ್ದೇಶಕರ ಪ್ರಕಾರ. ಅಲ್ಲಲ್ಲ, ಅವರ ಚೊಚ್ಚಲ ನಿರ್ದೇಶನದ “ನನ್ನ ಪ್ರಕಾರ’. ಹೌದು, ವಿನಯ್‌ ಬಾಲಾಜಿ ಈ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ವಿಎಫ್ಎಕ್ಸ್‌ ಆರ್ಟಿಸ್ಟ್‌ ಆಗಿ ಮೂರು ವರ್ಷ ಅನುಭವ ಇರುವ ವಿನಯ್‌ ಬಾಲಾಜಿ, ಕಿರುಚಿತ್ರಗಳನ್ನು ಮಾಡಿದ್ದಾರೆ. ಒಂದು ಕಿರುಚಿತ್ರ ಮಾಡಲು ಹೊರಟಾಗ, ಹುಟ್ಟಿಕೊಂಡ ಕಥೆ “ನನ್ನ ಪ್ರಕಾರ’. ಎರಡು ವರ್ಷಗಳಿಂದಲೂ ಅವರು ನಿರ್ಮಾಪಕರಿಗೆ ಅಲೆದಾಡಿದ್ದರಂತೆ. ಕೊನೆಗೆ ಸಿಕ್ಕಿದ್ದು, ಗುರುರಾಜ್‌. ಅವರು ಕಥೆ ಕೇಳಿ ತಮ್ಮ ನಾಲ್ವರು ಗೆಳೆಯರ ಜತೆ “ನನ್ನ ಪ್ರಕಾರ’ ಕ್ಕೆ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ. ಸಿನಿಮಾಗೆ ಚಾಲನೆಯೂ ಸಿಕ್ಕಾಗಿದೆ. ಕಿಶೋರ್‌, ಪ್ರಿಯಾಮಣಿ, ವಿಹಾನ್‌, ಮಯೂರಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರವರ ಪ್ರಕಾರ ಕಥೆ ಬಗ್ಗೆ ಹೇಳುತ್ತಾ ಹೋದರು.

Advertisement

“ಕೆಲ ದಿನಗಳ ಹಿಂದೆ ನಡೆದ ಘಟನೆಗಳ ಹಿಂದೆ ಸಾಗುವ ಕಥೆ ಇದು. ಇಲ್ಲಿ ನಾಲ್ವರು ಪ್ರಮುಖ ಪಾತ್ರಧಾರಿಗಳಿದ್ದಾರೆ. ಒಂದು ಘಟನೆ ನಡೆಯುತ್ತೆ. ಯಾರದ್ದು ಸರಿ, ತಪ್ಪು ಎಂಬುದೇ ಇಲ್ಲಿ ಯಕ್ಷಪ್ರಶ್ನೆ. ಅವೆಲ್ಲದ್ದಕ್ಕೂ ಉತ್ತರ ಕೊಡೋದು ರಾಕಿ. ಈ ರಾಕಿ ಪಾತ್ರ ಮಾಡುತ್ತಿರೋದು ಒಂದು ನಾಯಿ. ನಾಲ್ಕು ಕಥೆಗಳಿದ್ದರೂ, ಕೊನೆಯಲ್ಲಿ ಒಂದಕ್ಕೊಂದು ಲಿಂಕ್‌ ಸಿಗುತ್ತಾ ಹೋಗುತ್ತೆ. ಬಹುತೇಕ ಬೆಂಗಳೂರಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಜನವರಿಗೆ ಮುಗಿಯಲಿದೆ. ಕಥೆ ಪ್ರಕಾರವೇ ಹಾಡುಗಳು ಮೂಡಿಬರಲಿವೆ. ಇಲ್ಲಿ ರಾಕಿಯಿಂದ ಕಥೆ ಶುರುವಾಗಿ, ರಾಕಿಯಿಂದಲೇ ಮುಗಿಯುತ್ತೆ’ ಅಂತ ಹೇಳಿ ಸುಮ್ಮನಾದರು ನಿರ್ದೇಶಕ ವಿನಯ್‌ ಬಾಲಾಜಿ. ಆ ನಂತರ ಚಿತ್ರತಂಡದೆವರೆಲ್ಲರೂ ತಮ್ಮ ಪ್ರಕಾರ, ಚಿತ್ರಕಥೆ ಬಿಚ್ಚಿಡುತ್ತಾ ಹೋದರು.

ಕಿಶೋರ್‌ ಪ್ರಕಾರ: ಒಂದು ಘಟನೆ ನಡೆಯುತ್ತೆ. ನಾನಿಲ್ಲಿ ಆ ಘಟನೆಯ ತನಿಖೆ ಮಾಡುವ ಪೊಲೀಸ್‌ ಅಧಿಕಾರಿಯಾಗಿರುತ್ತೇನೆ. ಕಥೆ ಪ್ರಕಾರ ಎಲ್ಲವೂ ಸಸ್ಪೆನ್ಸ್‌. ಪ್ರೇಕ್ಷಕನ ಪ್ರಕಾರ ಇದು ಎಷ್ಟರ ಮಟ್ಟಿಗೆ ಗಮನಸೆಳೆಯುತ್ತೆ ಎಂಬುದನ್ನು ಸಿನಿಮಾ ನೋಡಬೇಕು. ನಾನೊಂಥರಾ ವಿಕ್ರಮ್‌ ಬೇತಾಳದ ಬೇತಾಳನಂತೆ ಕಾರ್ಯ ನಿರ್ವಹಿಸುವ ಅಧಿಕಾರಿ.

ಪ್ರಿಯಾಮಣಿ ಪ್ರಕಾರ: ಇದೊಂದು ಒಳ್ಳೇ ಕಥೆ. ಹತ್ತು ನಿಮಿಷ ಕಥೆ ಹೇಳ್ಳೋಕೆ ಬಂದ ನಿರ್ದೇಶಕರಿಗೆ ಎರಡು ಗಂಟೆ ಕಾಲ ಕಥೆ ಹೇಳುವಂತೆ ಮಾಡಿದೆ. ಆಗಲೇ ಇಷ್ಟವಾಗಿತ್ತು. ಆದರೆ, ತಕ್ಷಣ ಒಪ್ಪಲಿಲ್ಲ. ಒಂದು ವಾರದ ಬಳಿಕ ಒಪ್ಪಿದೆ. ನಾನಿಲ್ಲಿ ಅಮೃತ ಎಂಬ ಪಾತ್ರ ಮಾಡುತ್ತಿದ್ದೇನೆ. ಕಿಶೋರ್‌ ಜತೆ ಮಾಡುತ್ತಿರುವುದು ಖುಷಿಕೊಟ್ಟಿದೆ. ಕ್ರೈಮ್‌ ಥ್ರಿಲ್ಲರ್‌ ಕಥೆ ಆದ್ದರಿಂದ ಇಲ್ಲಿ ಕಥೆ ಎಲ್ಲೆಲ್ಲಿ ಹೋಗುತ್ತೆ, ಏನೆಲ್ಲಾ ಆಗುತ್ತೆ ಎಂಬುದನ್ನು ನಿರೀಕ್ಷಿಸಲಾಗಲ್ಲ.

ಮಯೂರಿ ಪ್ರಕಾರ: ಇದೊಂದು ಹೊಸ ಜಾನರ್‌ನ ಕಥೆಯಂತೆ. ಅಪ್ಪ ಅಮ್ಮ ಇಲ್ಲದ ವಿಸ್ಮಯ ಎಂಬ ಅನಾಥೆ ಹುಡುಗಿ ಪಾತ್ರ ನನ್ನದು. ಎನ್‌ಜಿಓ ಒಂದರಲ್ಲಿ ಕೆಲಸ ಮಾಡುವ ವಿಸ್ಮಯ ಲೈಫ‌ಲ್ಲಿ ಏನೆಲ್ಲಾ ವಿಸ್ಮಯಗಳಾಗುತ್ತವೆ ಅನ್ನೋದೇ ಕಥೆ.

Advertisement

ವಿಹಾನ್‌ ಪ್ರಕಾರ: ಒಳ್ಳೆಯ ಕಲಾವಿದರ ಜತೆ ಕೆಲಸ ಮಾಡುತ್ತಿರುವುದೇ ದೊಡ್ಡ ಸಂಗತಿಯಂತೆ. ಅವರಿಲ್ಲಿ ಬಡಕುಟುಂಬದ ಹುಡುಗನಾಗಿ ನಟಿಸುತ್ತಿದ್ದಾರೆ. ತಾಯಿ, ಮಗನ ಸೆಂಟಿಮೆಂಟ್‌ಗೆ ಹೆಚ್ಚು ಜಾಗವಿದೆ. ಗಿರಿಜಾ ಲೋಕೇಶ್‌ ತಾಯಿಯಾಗಿ ನಟಿಸುತ್ತಿದ್ದಾರೆ.

ನಿರ್ಮಾಪಕ ಗುರುರಾಜ್‌ ಪ್ರಕಾರ: “ಒಳ್ಳೇ ಕಥೆ ಸಿಕ್ಕಿದ್ದರಿಂದ ಗೆಳೆಯರಾದ ಕೃಷ್ಣಮೂರ್ತಿ, ವೆಂಕಟೇಶ್‌, ಜಗದೀಶ್‌, ಗೋವಿಂದ್‌ ಜತೆ ಸೇರಿ ಚಿತ್ರ ನಿರ್ಮಿಸುತ್ತಿದ್ದಾರಂತೆ. ಚಿತ್ರಕ್ಕೆ ಅರ್ಜುನ್‌ ಸಂಗೀತ ನೀಡುತ್ತಿದ್ದಾರೆ.ಎಲ್ಲರೂ ಅವರವರ ಪ್ರಕಾರ ಮಾತನಾಡುವ ಹೊತ್ತಿಗೆ ಮಾತುಕತೆಗೂ ಬ್ರೇಕ್‌ ಬಿತ್ತು.

Advertisement

Udayavani is now on Telegram. Click here to join our channel and stay updated with the latest news.

Next