ಬೆಳಗಾವಿ: ಮನೆಯಲ್ಲಿ ಮಲಗಿದ್ದ ವೇಳೆ ಭಾರೀ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿಗೆ ಎಂಟು ವರ್ಷದ ಬಾಲಕಿ ಸಜೀವ ದಹನವಾದ ದಾರುಣ ಘಟನೆ ಬೆಳಗಾವಿ ನಗರದಲ್ಲಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದೆ. ಅದೃಷ್ಟವಶಾತ್ ಈ ದುರಂತದಲ್ಲಿ ತಾಯಿ, ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳಗಾವಿ ನಗರದ ಅನಗೋಳದ ರುಘುನಾಥ ಪೇಟೆಯ ಕಸ್ತೂರಿ ರಾಣು ಮಲತವಾಡಿ (8) ಬೆಂಕಿಯಲ್ಲಿ ಸಜೀವ ದಹನಗೊಂಡ ನತದೃಷ್ಟ ಬಾಲಕಿ. ದುರಂತ ನಡೆದ ವೇಳೆ ತಂದೆ ರಾಣು ಗಂಗಾರಾಮ ಮಲತವಾಡಿ ಮನೆಯಲ್ಲಿ ಇರಲಿಲ್ಲ. ತಾಯಿ ಲಕ್ಷ್ಮಿ ಹಾಗೂ 12 ವರ್ಷದ ಬಾಳು ಮತ್ತು 10 ವರ್ಷದ ಗಂಗಾರಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವರ ಮುಂದೆ ಹಚ್ಚಿಟ್ಟಿದ್ದ ದೀಪ ಉರುಳಿ ಬೆಂಕಿ ಹೊತ್ತಿಕೊಂಡ ಪರಿಣಾಮ ಈ ದುರಂತ ನಡೆದಿದೆ ಎಂದು ಮನೆಯವರು ಹಾಗೂ ಸ್ಥಳೀಯರು ಹೇಳಿದ್ದರು. ಆದರೆ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ವಿದ್ಯುತ್ ತಗುಲಿ ಈ ಘಟನೆ ನಡೆದಿದೆ ಎಂದು ಪ್ರಕರಣ ದಾಖಲಾಗಿದೆ. ಬೆಂಕಿ ಅನಾಹುತದಲ್ಲಿ ಸುಮಾರು 10 ಲಕ್ಷ ರೂ. ಹಾನಿಯಾಗಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಘಟನೆ ನಡೆದಿದ್ದು ಹೇಗೆ?: ರಘುನಾಥ ಪೇಟೆಯಲ್ಲಿರುವ ಮನೆಯಲ್ಲಿ ತಾಯಿ ಹಾಗೂ ಮೂವರು ಮಕ್ಕಳಿದ್ದರು. ಸೋಮವಾರ ಸಂಜೆ ದೇವರ ಫೋಟೋ ಮುಂದೆ ಎಂದಿನಂತೆ ಕುಟುಂಬದವರು ದೀಪ ಹಚ್ಚಿದ್ದಾರೆ. ಊಟವಾದ ಬಳಿಕ ತಾಯಿ ಹಾಗೂ ಮೂವರು ಮಕ್ಕಳು ಮಲಗಿದ್ದಾರೆ. ಮಂಗಳವಾರ ಬೆಳಗಿನ ಜಾವ ಸುಮಾರು 2 ಗಂಟೆ ಸುಮಾರಿಗೆ ದೇವರ ಮುಂದೆ ಉರಿಯುತ್ತಿದ್ದ ದೀಪ ಆಕಸ್ಮಿಕವಾಗಿ ಕೆಳಗೆ ಬಿದ್ದು ಅಲ್ಲಿಯೇ ಪಕ್ಕದ ಬಟ್ಟೆಗೆ ತಾಗಿ ಹಾಸಿಗೆಗೆ ವ್ಯಾಪಿಸಿದೆ. ಆಗ ಯಾರಿಗೂ ಎಚ್ಚರ ಇರಲಿಲ್ಲ. ನಂತರ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಮನೆಗೆ ವ್ಯಾಪಿಸಿದ್ದಲ್ಲದೆ ಅಲ್ಲೇ ಮಲಗಿದ್ದ ಕಸ್ತೂರಿ ಬೆಂಕಿಗೆ ಸಿಲುಕಿ ಸಜೀವ ದಹನಗೊಂಡಿದ್ದಾಳೆ. ಬೆಂಕಿ ದುರಂತದಲ್ಲಿ ಮನೆಯಲ್ಲಿದ್ದ ವಸ್ತುಗಳೆಲ್ಲವೂ ಸುಟ್ಟು ಕರಕಲಾಗಿವೆ.
ಗಾಢ ನಿದ್ರೆಯಲ್ಲಿದ್ದ ತಾಯಿಗೆ ಹೊತ್ತಿ ಉರಿಯುತ್ತಿದ್ದ ಬೆಂಕಿ ಝಳ ತಾಗಿದೆ. ಗಾಬರಿಗೊಂಡು ಚೀರಾಡಿದ್ದಾಳೆ. ಪಕ್ಕದಲ್ಲಿದ್ದ ಇಬ್ಬರು ಚಿಕ್ಕ ಮಕ್ಕಳನ್ನು ಕೈಯಲ್ಲಿ ಹಿಡಿದುಕೊಂಡು ಮನೆಯಿಂದ ಹೊರಗೆ ಓಡಿ ಹೋಗಿದ್ದಾಳೆ. ಆದರೆ ಈ ಸಂದರ್ಭದಲ್ಲಿ ಕಸ್ತೂರಿ ಸಹ ಮನೆಯಲ್ಲಿ ಮಲಗಿದ್ದಾಳೆ ಎಂಬುದು ತಾಯಿಯ ಅರಿವಿಗೆ ಬಂದಿಲ್ಲ. ತಾಯಿಯ ಚೀರಾಟ ಕೇಳಿಸಿಕೊಂಡ ಅಲ್ಲಿನ ನಿವಾಸಿಗಳು ಮನೆಯಿಂದ ಹೊರಗೆ ಬಂದು ತಕ್ಷಣ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ದುರಂತದಲ್ಲಿ ಮಗಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.