ಬೀದರ: ವಾಹನ ಚಾಲನೆಯ ವೇಳೆ ಸಂಚಾರಿ ನಿಯಮಗಳನ್ನು ಪಾಲಿಸಿದಲ್ಲಿ ರಸ್ತೆ ಅಪಘಾತಗಳನ್ನು ನಿಯಂತ್ರಿಸಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧಿಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ಆರ್.ರಾಘವೇಂದ್ರ ಹೇಳಿದರು.
ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸರ್ಕಾರಿ ಕೈಗಾರಿಕಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಸಾಮಾಜಿಕ ನ್ಯಾಯ ದಿನಾಚರಣೆ ನಿಮಿತ್ತ ನಡೆದ ಕಾನೂನು ಅರಿವು- ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಕಾನೂನು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ವಾಹನ ಚಲಾಯಿಸುವ ಮುನ್ನ ಕಡ್ಡಾಯವಾಗಿ ವಾಹನ ಚಾಲನೆ ಪರವಾನಗಿ ಪತ್ರ ಪಡೆದಿರಬೇಕು. ವಾಹನಗಳಲ್ಲಿ ನಿಗದಿತ ಸಂಖ್ಯೆಕ್ಕಿಂತ ಹೆಚ್ಚು ಜನರು ಪ್ರಯಾಣಿಸಬಾರದು. ಜಾಗರೂಕತೆಯಿಂದ ವಾಹನ ಚಲಾಯಿಸಬೇಕು ಎಂದು ಸಲಹೆ ನೀಡಿದರು.
ಒಂದನೇ ಹೆಚ್ಚುವರಿ ನ್ಯಾಯಾಧಿಧೀಶ ಉಜ್ವಲಾ ವೀರಣ್ಣಾ ಮಾತನಾಡಿ, ವಿದ್ಯಾರ್ಥಿಗಳು ಸಮಯ ನಿರ್ವಹಣೆಯತ್ತ ಹೆಚ್ಚು ಗಮನ ವಹಿಸಬೇಕು. ಎಲ್ಲಾ ತರಗತಿಗಳಿಗೂ ತಪ್ಪದೇ ಹಾಜರಾಗಿ ಕಠಿಣ ಅಭ್ಯಾಸ ಮಾಡಿದಲ್ಲಿ ಯಶಸ್ಸುಗಳಿಸಲು ಸಾಧ್ಯವಿದೆ ಎಂದರು.
ಸಂಘದ ಅಧ್ಯಕ್ಷ ಕೆ.ಎಚ್. ಪಾಟೀಲ ಮಾತನಾಡಿ, ಕಾನೂನು ಪಾಲನೆಯಾಗದೇ ಇದ್ದಲ್ಲಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ
ಎಂದು ಹೇಳಿದರು. ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಬಿರಾದಾರ, ಪ್ರಭಾರಿ ಪ್ರಾಚಾರ್ಯ ಶೀವಶಂಕರ ಟೋಕರೆ, ಕೃಷ್ಣ, ಬೋಧಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.