ನೆಲಮಂಗಲ: ಸಮೀಪದ ರಾಷ್ಟ್ರೀಯ ಹೆದ್ದಾರಿ 75ರ ಮಹದೇವಪುರ ಬಳಿ ರಸ್ತೆಯಲ್ಲಿ ನಿಂತಿದ್ದ ನೀರಿನ ಟ್ಯಾಂಕರ್ ಗಮನಿಸದೆ, ಕೆಎಸ್‌ಆರ್‌ಟಿಸಿ ಬಸ್ ನಿಯಂತ್ರಣ ತಪ್ಪಿ, 15 ಅಡಿ ಆಳದ ಸರ್ವಿಸ್ ರಸ್ತೆಗೆ ನುಗ್ಗಿ ಮರಕ್ಕೆ ಡಿಕ್ಕಿಯಾಗಿದ್ದು, ಪ್ರಯಾಣಿಕರೊಬ್ಬರು ಸಾವನ್ನಪ್ಪಿ, ನಾಲ್ಕೈದು ಮಂದಿಗೆ ಗಂಭೀರ ಗಾಯವಾಗಿದೆ.
ತಾಲೂಕಿನ ಗುರುವನಹಳ್ಳಿ ನಿವಾಸಿ ಶೋಭಾ(28) ಮೃತ ರ್ದುದೈವಿ. ಗಾಯಾಗಳು ನೆಲಮಂಗಲ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾಸನ ದಿಂದ-ಬೆಂಗಳೂರಿನ ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ರಸ್ತೆಯಲ್ಲಿ ನಿಂತಿದ್ದ ಟ್ಯಾಂಕರ್ ಗಮನಿಸದೆ, ಅಪಘಾತ ತಪ್ಪಿಸಲು ಹೋಗಿ 15 ಅಡಿ ಆಳಕ್ಕೆ ಬಸ್ ನುಗ್ಗಿದೆ.
ಅಪಘಾತ ಹಾಗೂ ಸ್ಥಳೀಯ ಮಹಿಳೆ ಸಾವನ್ನಪ್ಪಿದ್ದ ಹಿನ್ನೆಲೆ ದೇವಿಹಳ್ಳಿ ಟೋಲ್ ವಿರುದ್ಧ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿ ಮುತ್ತಿಗೆ ಹಾಕಿದ್ದಾರೆ. ಟೋಲ್ ನಿರ್ಲಕ್ಷ್ಯದಿಂದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ, ಪ್ರತಿಭಟನೆ ನಡೆಸಿ, ಟೋಲ್ ಕಂಪನಿಗೆ ನುಗ್ಗಲು ಸ್ಥಳೀಯರು ಪ್ರಯತ್ನಿಸಿದಾಗ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು.
ಇದನ್ನೂ ಓದಿ:ಪರಿಸರ ಅಧಿಕಾರಿ ಮನೆ, ಕಚೇರಿ ಮೇಲೆ ಎಸಿಬಿ ದಾಳಿ: ಅಪಾರ ಪ್ರಮಾಣ ಆಸ್ತಿ ಪತ್ತೆ
ಜನರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು. ಘಟನೆ ಸಂಬಂಧ ನೆಲಮಂಗಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯರ ಹೋರಾಟದ ಹಿನ್ನೆಲೆ ಮೃತ ಮಹಿಳೆಯ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಭರವಸೆ ನೀಡಿದ್ದು, ಸ್ಥಳೀಯರು ಪ್ರತಿಭಟನೆ ಕೈಬಿಟ್ಟರು.