ಬಂಟ್ವಾಳ: ಮೂರು ತಿಂಗಳ ಹಿಂದಷ್ಟೇ ಉದ್ಯೋಗಕ್ಕಾಗಿ ಕುವೈಟ್‌ಗೆ ತೆರಳಿ ಅಲ್ಲಿ ವಾಹನ ಅಪಘಾತಕ್ಕೊಳಗಾಗಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದ ವಾಮದಪದವು ಪಿಲಿಮೊಗರಿನ ವಿರಾಜ್ ಈಗ ಗುಣಮುಖರಾಗಿ ಊರಿಗೆ ಮರಳಿದ್ದಾರೆ.
ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಅವರ ಮನವಿಗೆ ಸ್ಪಂದಿಸಿದ ಕುವೈಟ್‌ನಲ್ಲಿರುವ ನಮ್ಮೂರಿನವರು ಯುವಕನನ್ನು ಊರಿಗೆ ಕಳುಹಿಸಿಕೊಟ್ಟಿದ್ದಾರೆ.
ಅಪಘಾತಕ್ಕೀಡಾಗಿದ್ದ ವಿರಾಜ್‌ನ ಕೈ ಹಾಗೂ ತಲೆಗೆ ಗಂಭೀರ ಗಾಯವಾಗಿತ್ತು. ಅವರು 25 ದಿನಗಳ ಕಾಲ ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಹುತೇಕ ಗುಣಮುಖರಾಗಿದ್ದಾರೆ. ತಲೆಗೆ ಗಾಯವಾಗಿದ್ದ ಕಾರಣ ನೆನಪು ಶಕ್ತಿಯ ತೊಂದರೆ ಇದೆ. ಸರಿಯಾದ ಚಿಕಿತ್ಸೆ ನೀಡಿದರೆ ಮೂರು ತಿಂಗಳಲ್ಲಿ ಸಂಪೂರ್ಣ ಗುಣಮುಖರಾಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿದೆ.
ಬಸ್ಸು ಚಾಲಕರಾಗಿ ಕುವೈಟ್‌ಗೆ ಉದ್ಯೋಗಕ್ಕೆ ತೆರಳಿದ್ದ ವಿರಾಜ್ ಮೊದಲ ದಿನದ ಕೆಲಸ ಮುಗಿಸಿ 2ನೇ ದಿನದ ಕರ್ತವ್ಯದಲ್ಲಿದ್ದರು. ಈ ವೇಳೆ ಬಸ್ಸಿನ ಟಿಕೆಟ್ ಮೆಷಿನ್ ಹಾಳಾಗಿದೆ ಎಂದು ಕಂಪೆನಿಗೆ ತಿಳಿಸಿ ಬಸ್ಸನ್ನು ನಿಲ್ದಾಣದಲ್ಲಿ ನಿಲ್ಲಿಸಿ ಕೆಳಗಿಳಿದಿದ್ದರು. ಈ ವೇಳೆ ಕಾರೊಂದು ಅವರಿಗೆ ಢಿಕ್ಕಿಯಾಗಿತ್ತು. ಗಂಭೀರ ಗಾಯಗೊಂಡಿದ್ದ ಅವರನ್ನು ಅಪರಿಚಿತ ವ್ಯಕ್ತಿ ಎಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ವಿಷಯ ಸ್ನೇಹಿತರ ಮೂಲಕ ವಿರಾಜ್ ಸಹೋದರ ವಿನೋದ್‌ಗೆ ತಿಳಿದರೂ, ಅವರ ಆರೋಗ್ಯದ ವಿವರ ಸಿಗಲಿಲ್ಲ. ಬಳಿಕ ವಿನೋದ್ ಅವರು ಈ ಬಗ್ಗೆ ಬಂಟ್ವಾಳ ಶಾಸಕರಿಗೆ ತಿಳಿಸಿದರು. ಶಾಸಕರು ತತ್‌ಕ್ಷಣ ಕುವೈಟ್‌ನ ತುಳುಕೂಟದ ಮಾಜಿ ಅಧ್ಯಕ್ಷ ರಾಜ್ ಭಂಡಾರಿ ತಿರುಮಲೆಗುತ್ತು ಹಾಗೂ ಸನತ್ ಶೆಟ್ಟಿ ಅವರಿಗೆ ತಿಳಿಸಿದರು. ಅವರು ಅಲ್ಲಿನ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ, ವಿರಾಜ್ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲೇ ಉದ್ಯೋಗದಲ್ಲಿರುವ ಪ್ರಶಾಂತ್ ಪೂಜಾರಿಗೆ ತಿಳಿಸಿದರು.
ಆಸ್ಪತ್ರೆಯಲ್ಲಿ ವಿರಾಜ್ ಅವರನ್ನು ಪ್ರಶಾಂತ್ ಚೆನ್ನಾಗಿ ನೋಡಿಕೊಂಡಿದ್ದರು. ವಿರಾಜ್‌ನ ಊರಿನವರೇ ಆಗಿರುವ ಕುವೈಟ್‌ನ ಹೊಟೇಲ್ ಉದ್ಯಮಿ ರಾಜೇಶ್ ಪೂಜಾರಿ ಅವರು ಕೂಡ ನೆರವಾಗಿದ್ದಾರೆ. ವಿರಾಜ್ ಊರಿಗೆ ಮರಳಲು ಅವರು ಉದ್ಯೋಗದಾತ ಕಂಪೆನಿ ಹಾಗೂ ಬಿಲ್ಲವ ಸಂಘ ಸದಸ್ಯರು ಹೆಚ್ಚಿನ ಸಹಕಾರ ನೀಡಿದ್ದಾರೆ. ಬಿಲ್ಲವ ಸಂಘದ ಪ್ರಮುಖರು, ಕುವೈಟ್‌ನಲ್ಲಿರುವ ಬಂಧುಗಳು, ಶಾಸಕರು, ಅವರ ಆಪ್ತ ಸಹಾಯಕ ಪವನ್ ಶೆಟ್ಟಿ ಅವರ ಸಹಕಾರದಿಂದ ಸಹೋದರ ಊರಿಗೆ ಬರುವಂತಾಗಿದೆ ಎಂದು ವಿನೋದ್ ತಿಳಿಸಿದ್ದಾರೆ.