ಬೆಂಗಳೂರು: ಎರಡು ಸಾವಿರ ರೂ. ನೋಟು ಸ್ವೀಕಾರಕ್ಕೆ ಸಂಬಂಧಿಸಿ ಎದ್ದಿರುವ ಗೊಂದಲಗಳಿಗೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಈಗ ತೆರೆ ಎಳೆದಿದೆ. ಸರಕಾರಿ ಸಾರಿಗೆ ಸಂಸ್ಥೆಯ ಎಲ್ಲ ಬಸ್‌ನಲ್ಲೂ ಪ್ರಯಾಣಿಕರಿಂದ 2 ಸಾವಿರ ರೂ. ನೋಟು ಸ್ವೀಕರಿಸಲಾಗುತ್ತಿದೆ. ಈ ಬಗ್ಗೆ ಗೊಂದಲ ಬೇಡ ಎಂದು ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜತೆಗೆ 2 ಸಾವಿರ ರೂ.ಗಳನ್ನು ಪ್ರಯಾಣಿಕರಿಂದ ಸ್ವೀಕರಿಸುವಂತೆ ಸಿಬಂದಿಗೆ ಸೂಚಿಸಿದ್ದಾರೆ.
ಈ ಹಿಂದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಹೊಸಕೋಟೆ ಡಿಪೋ ಪ್ರಯಾಣಿಕರಿಂದ 2,000 ರೂ.ನೋಟುಗಳನ್ನು ಸ್ವೀಕರಿಸದಂತೆ ಆದೇಶ ಹೊರಡಿಸಿದ ಬಳಿಕ ಗೊಂದಲ ಉಂಟಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಬಿಎಂಟಿಸಿ ಸ್ಪಷ್ಟನೆ ನೀಡಿದ್ದು, ಪ್ರಯಾಣಿಕರಿಂದ 2 ಸಾವಿರ ರೂ.ನೋಟು ಪಡೆಯಬಹುದು ಎಂದು ತಿಳಿಸಿದೆ. ಕೆಲವು ಗೊಂದಲಗಳ ಕಾರಣದಿಂದ ಹೊಸಕೋಟೆ ಡಿಪೋ ಅಧಿಕಾರಿಗಳು 2000 ರೂ. ನೋಟು ತೆಗೆದುಕೊಳ್ಳದಂತೆ ಆದೇಶ ಹೊರಡಿಸಿದ್ದರು. ಈಗ ಆ ಆದೇಶವನ್ನು ಹಿಂಪಡೆಯಲಾಗಿದೆ. ಬಿಎಂಟಿಸಿ ಬಸ್‌ಗಳಲ್ಲಿ ನೋಟುಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಕೂಡ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ನಿಗಮದ ಬಸ್‌ಗಳು ಪ್ರಯಾಣಿಕರಿಂದ 2,000 ರೂ. ನೋಟುಗಳನ್ನು ಸ್ವೀಕರಿಸುವುದನ್ನು ಮುಂದುವರಿಸುತ್ತವೆ ಎಂದು ಸ್ಪಷ್ಟಪಡಿಸಿದೆ. ಸಂಸ್ಥೆಯು 2 ಸಾವಿರ ನೋಟುಗಳನ್ನು ತೆಗೆದುಕೊಳ್ಳದಂತೆ ಸಿಬಂದಿಗೆ ಯಾವುದೇ ಆದೇಶ ನೀಡಿಲ್ಲ ಎಂದು ಸಾರ್ವಜನಿಕ ಸಂಪರ್ಕ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.