ಬೆಂಗಳೂರು: ಭಾರತೀಯ ಪೊಲೀಸ್ ಸೇವೆಗೆ ಕೆ.ಅಣ್ಣಾಮಲೈ ನೀಡಿದ್ದ ರಾಜೀನಾಮೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ.
ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಣ್ಣಾಮಲೈ, ಮೇ ತಿಂಗಳಿನಲ್ಲಿ ತಮ್ಮ ಐಪಿಎಸ್ ಸೇವೆಗೆ ರಾಜೀನಾಮೆ ಸಲ್ಲಿಸಿದ್ದರು. ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದರು.
ಇದೀಗ ಅಣ್ಣಾಮಲೈ ಅವರ ರಾಜೀನಾಮೆಯನ್ನು ಸೆ.15ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಅಂಗೀಕರಿಸಿ, ಆದೇಶ ಹೊರಡಿಸಿದೆ.
ತಮಿಳುನಾಡು ಮೂಲದ ಕೆ.ಅಣ್ಣಾಮಲೈ, 2011ರ ಬ್ಯಾಚ್‌ನ ಕರ್ನಾಟಕ ಐಪಿಎಸ್ ಅಧಿಕಾರಿಯಾಗಿದ್ದರು. ಉಡುಪಿ ಎಎಸ್ಪಿ ಆಗಿ ಮೊದಲು ಕರ್ತವ್ಯ ಆರಂಭಿಸಿದ ಅಣ್ಣಾಮಲೈ, ಬಳಿಕ ಉಡುಪಿ, ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಆಗಿ ಸೇವೆ ಸಲ್ಲಿಸಿದ್ದರು. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಆಗಿದ್ದಾಗಲೇ ತಮ್ಮ ಸೇವೆಗೆ ರಾಜೀನಾಮೆ ನೀಡಿದ್ದರು.
ಅಣ್ಣಾಮಲೈಯವರ ರಾಜೀನಾಮೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ರಾಜೀನಾಮೆ ವಾಪಸ್ ಪಡೆಯುವ ಬಗ್ಗೆ ಅಂದಿನ ಸಮ್ಮಿಶ್ರ ಸರ್ಕಾರ ಕೂಡ ಮನವೊಲಿಸಿತ್ತು.