ಬೆಳ್ತಂಗಡಿ: ತಾಲೂಕು ಕಚೇರಿಯಲ್ಲಿ ವೃದ್ಧರು, ಗರ್ಭಿಣಿಯರಿಗೆ ಕುಳಿತುಕೊಳ್ಳಲು ಸೂಕ್ತ ಆಸನ ವ್ಯವಸ್ಥೆ ಇಲ್ಲ. ಶೌಚಾಲಯಗಳು ಅವ್ಯವಸ್ಥೆಯಾಗಿದೆ. ತಹಶೀಲ್ದಾರ್ ಬಳಿ ಅರ್ಜಿ ವಿಚಾರವಾಗಿ ಮಾಹಿತಿ ಪಡೆಯಲು ತೆರಳಿದರೆ ತಹಶೀಲ್ದಾರ್ ಸ್ಪಂದಿಸುತ್ತಿಲ್ಲ. ಈಕೂಡಲೇ ಕ್ರಮ ವಹಿಸುವಂತೆ ಸಾರ್ವಜನಿಕರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದರು.
ಬೆಳ್ತಂಗಡಿ ಮಿನಿ ವಿಧಾನಸೌಧದಲ್ಲಿ ಲೋಕಾಯುಕ್ತ ಮಂಗಳೂರು ವಿಭಾಗದ ಅಧಿಕಾರಿ ಸುರೇಂದ್ರ ಹಾಗೂ ಪ್ರದೀಪ್ ಗೌಡ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಂದರ್ಭ ದೂರುಗಳು ಕೇಳಿಬಂದವು.
ತಹಶೀಲ್ದಾರ್ ಬಳಿ ಅರ್ಜಿ ಮಾಹಿತಿ ಪಡೆಯಲು ತೆರಳಿದರೆ ಅವಮಾನ ಮಾಡಿದ್ದಾರೆ ಎಂದು ನಿವೃತ್ತ ವಿ.ಎ. ಕಡೆಮಾರು ಗೋಪಾಲಕೃಷ್ಣ ಗೌಡ ದೂರಿದರು. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಶೀಲಿಸುವುದಾಗಿ ಅಧಿಕಾರಿ ಸುರೇಂದ್ರ ತಿಳಿಸಿದರು.
ಅತಿಕ್ರಮಣ ತೆರವಿಗೆ ಮನವಿ
ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ಮೀಸಲಿರಿಸಿದ್ದ ಸ್ಥಳವನ್ನು ಮಾಜಿ ಗ್ರಾ.ಪಂ. ಸದಸ್ಯೆಯೊಬ್ಬರು ತಮ್ಮ ಕೆಲಸದಾಕೆಗೆ ಮನೆ ಕಟ್ಟಿಕೊಡುವ ಸಲುವಾಗಿ ಅತಿಕ್ರಮಣ ಮಾಡಲಾಗಿದೆ. ಈ ಕೂಡಲೇ ತೆರವುಗೊಳಿಸಬೇಕು ಎಂದು ಬೆಳಾಲು ಗ್ರಾಮದ ಓಣಿಯಾಲು ನಿವಾಸಿ ರಮೇಶ್ ಮುಗೇರ ದೂರು ನೀಡಿದರು.
ಈ ಕುರಿತು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸುವಂತೆ ಸೂಚಿಸಿದ ಅಧಿಕಾರಿಗಳು, ತಹಶೀಲ್ದಾರ್ ಕ್ರಮ ವಹಿಸದಿದ್ದರೆ ಲೋಕಾಯುಕ್ತ ಅಧಿಕಾರಿಗಳು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಅತಿಕ್ರಮಣ ತೆರವಿಗೆ ರಮೇಶ್ ಮುಗೇರ ಅವರು ತಹಶೀಲ್ದಾರ್ ಅವರಿಗೆ ಮನವಿ ನೀಡಿದರು.