ಉಡುಪಿ: ಪೋಸಾರ್ ಹರಿ ಶೆಣೈ ಮತ್ತು ಸಖು ಬಾೖ ಅವರ ಹೆಸರಿನಲ್ಲಿ ಪುತ್ರ ಡಾ| ಕೃಷ್ಣ ಶೆಣೈ ಅವರು ಎಂಜಿಎಂ ಕಾಲೇಜಿನಲ್ಲಿ ಸ್ಥಾಪಿಸಿರುವ ದತ್ತಿನಿಧಿಯ ಉದ್ಘಾಟನೆ ಹಾಗೂ ಇದಕ್ಕೆ ಸಂಬಂಧಿಸಿದ ಒಡಂಬಡಿಕೆಯ ವಿನಿಮಯವು ನೂತನ ರವೀಂದ್ರ ಮಂಟಪದಲ್ಲಿ ಗುರುವಾರ ಜರಗಿತು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಅಧ್ಯಕ್ಷ, ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅವರು ಮಾತನಾಡಿ, ಬಡತನವನ್ನು ಸವಾಲಾಗಿ ಸ್ವೀಕರಿಸಿ ಜೀವನದಲ್ಲಿ ಸಾಧನೆ ಮಾಡಬೇಕು. ಪಾಲಕರು ಮಕ್ಕಳಿಗೆ ನೀಡಬಹುದಾದ ದೊಡ್ಡ ಆಸ್ತಿ ಎಂದರೆ ಶಿಕ್ಷಣ. ಪ್ರತಿಯೊಬ್ಬರು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು ಎಂದರು.
ಮಣಿಪಾಲ ಫೈನಾನ್ಸ್ ಕಾರ್ಪೊರೇಶನ್ ಲಿ. ಎಂಡಿ ಟಿ. ನಾರಾಯಣ ಎಂ. ಪೈ ಅವರು ಮಾತನಾಡಿ, ಸಮಾಜಕ್ಕೆ ಡಾ| ಟಿಎಂಎ ಪೈ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ಜತೆಗೆ ಡಾ| ಕೃಷ್ಣ ಶೆಣೈ ಅವರು ಕಾಲೇಜಿನ ಹಳೇ ವಿದ್ಯಾರ್ಥಿಯಾಗಿ ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದರು.
ಉದಾತ್ತ ಗುರಿ ಹೊಂದಬೇಕು:
Related Articles
ದತ್ತಿನಿಧಿಯ ಪ್ರಾಯೋಜಕರೂ ಆದ ಸನ್ ವ್ಯಾಲಿ ಎಲೆಕ್ಟ್ರಾನಿಕ್ಸ್ ಅಧ್ಯಕ್ಷ ಮತ್ತು ಸಿಇಒ ಡಾ| ಕೃಷ್ಣ ಶೆಣೈ ಅವರು ಮಾತನಾಡಿ, ವಿದ್ಯಾರ್ಥಿಗಳು ಉದಾತ್ತ ಗುರಿ ಹೊಂದಿರಬೇಕು. ಆಗ ದೊಡ್ಡ ಸಾಧನೆ ಸಾಧ್ಯ. ಕಠಿನ ಪರಿಶ್ರಮದಿಂದ ಎಲ್ಲವನ್ನು ಸಾಧಿಸಲು ಸಾಧ್ಯವಿದೆ ಎಂದರು.
ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷ ಟಿ. ಸತೀಶ್ ಪೈ, ಡಾ| ಕೃಷ್ಣ ಶೆಣೈ ಅವರ ಪತ್ನಿ ಲೀಲಾ ಕೆ. ಶೆಣೈ, ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಕಾರ್ಯದರ್ಶಿ ವರದರಾಯ ಪೈ, ಮಹಾಲಕ್ಷ್ಮೀ, ಪಿಯು ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ, ಡಾ| ಕೃಷ್ಣ ಶೆಣೈ ಅವರ ಕುಟುಂಬದ ಸದಸ್ಯರು, ಸ್ನೇಹಿತರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ ಸ್ವಾಗತಿಸಿದರು. ಕಂಪ್ಯೂಟರ್ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ| ಎಂ. ವಿಶ್ವನಾಥ ಪೈ ವಂದಿಸಿದರು. ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕಿ ಸೌಮ್ಯಲತಾ ನಿರೂಪಿಸಿದರು. ಡಾ| ಕೃಷ್ಣ ಶೆಣೈ ಕುಟುಂಬದ ಸದಸ್ಯರು, ಪ್ರಾಧ್ಯಾಪಕರು, ಸ್ನೇಹಿತರು ಅವರ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
ದತ್ತಿನಿಧಿ ವಿವರ :
ಡಾ| ಕೃಷ್ಣ ಶೆಣೈ ಅವರು ತಮ್ಮ ತಂದೆ-ತಾಯಿ ಹೆಸರಿನಲ್ಲಿ ಎಂಜಿಎಂ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಿರುವ ಪೋಸಾರ್ ಹರಿ ಶೆಣೈ ಮತ್ತು ಸಖು ಬಾೖ ದತ್ತಿನಿಧಿಯು 2022-23ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ.
ಅದರಂತೆ ಎಂಜಿಎಂ ಪಿಯುಸಿ ಕಾಲೇಜಿನ ವಿಜ್ಞಾನ ವಿಭಾಗದ ಪ್ರಥಮ ವರ್ಷದ ಅಂತಿಮ ಪರೀಕ್ಷೆಯ ಟಾಪರ್‌ಗೆ ವಿಶ್ರಾಂತ ಪ್ರಾಂಶುಪಾಲ ಪ್ರೊ| ಶ್ರೀಶ ಆಚಾರ್ಯ ಅವರ ಹೆಸರಿನಲ್ಲಿ 25,000 ರೂ.ಗಳ ಚೆಕ್ ವಿತರಿಸಲಾಗುತ್ತದೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಅಂತಿಮ ಪರೀಕ್ಷೆಯ ಟಾಪರ್‌ಗೆ ವಿಶ್ರಾಂತ ಪ್ರಾಂಶುಪಾಲ ಪ್ರೊ| ಅಲ್ವಿನ್ ಡಿ’ಸೋಜಾ ಅವರ ಹೆಸರಿನಲ್ಲಿ 25,000 ಚೆಕ್ ನೀಡಲಾಗುತ್ತದೆ. ಹಾಗೆಯೇ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿ ಐಐಟಿಯಲ್ಲಿ ಎಂಜಿನಿಯರಿಂಗ್‌ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ವಿಶ್ರಾಂತ ಪ್ರಾಂಶುಪಾಲ ಪ್ರೊ| ಕೆ. ರಾಮದಾಸ್ ಅವರ ಹೆಸರಿನಲ್ಲಿ 25,000 ರೂ. ಚೆಕ್ ನೀಡುವ ಒಪ್ಪಂದದ ದಾಖಲಾತಿ ಪತ್ರವನ್ನು ಡಾ| ಕೃಷ್ಣ ಶೆಣೈ ಹಾಗೂ ಡಾ| ಎಚ್.ಎಸ್. ಬಲ್ಲಾಳ್ ಅವರು ವಿನಿಮಯ ಮಾಡಿಕೊಂಡರು.