Advertisement

ತಣಿದನು ಮುನಿದ ವರುಣ: ಚುರುಕುಗೊಂಡಿತು ಕಟಾವು ಕಾರ್ಯ

07:10 AM Oct 25, 2017 | Team Udayavani |

ಕೋಟ: ದೀಪಾವಳಿಗೆ ಎರಡು-ಮೂರು ದಿನಗಳಿರುವಾಗ ಸುರಿದ ಭಾರೀ ಮಳೆಯಿಂದ ಕರಾವಳಿಯಲ್ಲಿ ಕಟಾವಿಗೆ ಹಿನ್ನಡೆಯಾಗಿತ್ತು. ಹೀಗಾಗಿ ಹೊರರಾಜ್ಯ, ಹೊರ ಜಿಲ್ಲೆಗಳಿಂದ ಬಂದ ಕಟಾವು ಯಂತ್ರಗಳು ಹತ್ತು-ಹದಿನೈದು ದಿನ ಕೆಲಸವಿಲ್ಲದೆ ನಿಂತಿದ್ದವು. ಆದರೆ ಇದೀಗ ಅರ್ಭಟಿಸಿದ್ದ  ವರುಣ ಶಾಂತನಾಗಿದ್ದಾನೆ. ಹೀಗಾಗಿ ರೈತ ಖುಷಿ-ಖುಷಿಯಲ್ಲಿ  ಗದ್ದೆ ಕಡೆ ಹೆಜ್ಜೆ ಹಾಕುತ್ತಿದ್ದಾನೆ.

Advertisement

ಚುರುಕು ಪಡೆಯಿತು ಕಟಾವು
ತಮಿಳುನಾಡು, ಕೇರಳ ಮುಂತಾದ ಹೊರ ರಾಜ್ಯಗಳ ಜತೆಗೆ ದಾವಣಗೆರೆ, ರಾಯಚೂರು,  ಶಿವಮೊಗ್ಗ, ತೀರ್ಥಳ್ಳಿ, ಮುಂತಾದ ಭಾಗಗಳಿಂದ ನೂರಾರು ಸಂಖ್ಯೆಯ ಕಟಾವು ಯಂತ್ರಗಳು ಜಿಲ್ಲೆಗೆ ಆಗಮಿಸಿವೆ. ಇದೀಗ ರೈತರು ಒಂದೇ ಬಾರಿಗೆ  ಕಟಾವಿಗೆ ಮುಂದಾಗಿರುವುದರಿಂದ ಯಂತ್ರಗಳಿಗೆ ಬೇಡಿಕೆ ಹೆಚ್ಚಿದೆ.  ಬುಕ್ಕಿಂಗ್‌ ಮಾಡಿಕೊಂಡು ಕಟಾವು ನಡೆಸುವ ಪರಿಸ್ಥಿತಿ ಇದೆ. ಆರಂಭದಲ್ಲಿ ಸಣ್ಣ ಯಂತ್ರಕ್ಕೆ 1600ರಿಂದ 1800 ರೂ,  ದೊಡ್ಡ ಯಂತ್ರಕ್ಕೆ 2000 ದಿಂದ 2200ರೂ ಬಾಡಿಗೆ ನಿಗದಿಪಡಿಸಲಾಗಿತ್ತು. ಆದರೆ ಪ್ರಸ್ತುತ ಬೇಡಿಕೆ ಹೆಚ್ಚಿರುವುದರಿಂದ ಬಾಡಿಗೆ  ನೂರರಿಂದ-ಐದುನೂರರ ತನಕ ಹೆಚ್ಚಳವಾಗಿದೆ.  ಪೈರು ಗದ್ದೆಯಲ್ಲಿ ಹಾಳಾಗುವ ಪರಿಸ್ಥಿತಿ ಇರುವುದರಿಂದ ಎಷ್ಟೇ ಹೆಚ್ಚಿಗೆ ಕೇಳಿದರು ಹಿಂದೆ-ಮುಂದೆ ನೋಡದೆ  ಕಟಾವು ನಡೆಸಬೇಕಾಗಿದೆ.  ಹೊರ ಜಿಲ್ಲೆಯಿಂದ ಕಡಿಮೆ ಬಾಡಿಗೆಗೆ ಕಟಾವು ಯಂತ್ರವನ್ನು ಕರೆತಂದು ರೈತರಿಂದ ದುಪ್ಪಟ್ಟು ಬಾಡಿಗೆಯನ್ನು ಪಡೆಯುವ ಮಧ್ಯವರ್ತಿಗಳ ಹಾವಳಿ ಕೂಡ ಚಾಲ್ತಿಯಲ್ಲಿದೆ.

ಸಾಂಪ್ರದಾಯಿಕ ವಿಧಾನ ಅಪರೂಪ
ಇದೀಗ ಸಂಪ್ರದಾಯಿಕ ವಿಧಾನದ ಮೂಲಕ ಕಟಾವು ಮಾಡುವ ರೈತರ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ. ಕಟಾವು ಯಂತ್ರದ ಮೂಲಕ ಸಮಯ ಹಾಗೂ ಹಣ ಉಳಿತಾಯವಾಗುವುದರಿಂದ ಹೆಚ್ಚಿನ ರೈತರು ಯಾಂತ್ರೀಕೃತ ವಿಧಾನದ ಕಡೆಗೆ ಮುಖ ಮಾಡಿದ್ದಾರೆ.  ಸಣ್ಣ-ಪುಟ್ಟ  ಬೇಸಾಯಗಾರರು ಮನೆಯವರೇ ಸೇರಿಕೊಂಡು ಸಾಂಪ್ರದಾಯಿಕ ವಿಧಾನದ ಮೂಲಕ ಕಟಾವು ಮಾಡುವ ದೃಶ್ಯ ಅಲ್ಲಲ್ಲಿ ಕಂಡುಬರುತ್ತಿದೆ.

ಬಾಡಿಗೆ ಸೇವಾ ಕೇಂದ್ರದಿಂದ ಲಾಭವೆಷ್ಟು ?
ಕೃಷಿ ಇಲಾಖೆಯಿಂದ ಬಾಡಿಗೆ ಸೇವಾ ಕೇಂದ್ರಗಳ ಮೂಲಕ ಕಟಾವು ಯಂತ್ರಗಳನ್ನು ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯ ಕೆಲವು ಹೋಬಳಿಗಳಲ್ಲಿ   ಬಾಡಿಗೆ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಇಲ್ಲಿ ಕನಿಷ್ಠ ಸಂಖ್ಯೆಯ ಕಟಾವು ಯಂತ್ರಗಳಿರುವುದರಿದ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಇದರ ಸೇವೆ ಸಿಗುತ್ತಿಲ್ಲ ಎನ್ನುವುದು ರೈತರ ಅಸಮಾಧಾನವಾಗಿದೆ.  ಆದರೆ ಈ ಕೇಂದ್ರಗಳು ನಿಗದಿತ ಮೊತ್ತದಲ್ಲಿ ಕಟಾವು ಮಾಡುವುದರಿಂದ ಖಾಸಗಿಯವರಿಗೆ ದೊಡ್ಡಮಟ್ಟದಲ್ಲಿ ಬಾಡಿಗೆ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಮಾತ್ರ ಸಮಾಧಾನದ ಸಂಗತಿಯಾಗಿದೆ.

ರೈತರಲ್ಲಿ  ಸಂಘಟನೆಯ ಕೊರತೆ
ರೈತರಲ್ಲಿ ಒಗ್ಗಟ್ಟು, ಸಂಘಟನೆಯ ಕೊರತೆಯಿಂದ ಕೃಷಿ ಚಟುವಟಿಕೆ ಕಷ್ಟವಾಗುತ್ತಿದೆ. ನಾಟಿ ಸಂದರ್ಭ ಎಲ್ಲರೂ ಒಟ್ಟಾಗಿ ನಾಟಿ ಮಾಡಿದಲ್ಲಿ ಒಟ್ಟಿಗೆ ಕಟಾವಿಗೆ  ಬಂದರೆ ಯಂತ್ರದ ಸಾಗಣಿಕೆ ವೆಚ್ಚ, ಸಮಯ ಉಳಿತಾಯವಾಗುತ್ತದೆ. ಆಗ ರಿಯಾಯಿತಿ ದರದಲ್ಲಿ ಕಟಾವು ಸಾಧ್ಯವಿದೆ. ರೈತ ಸಂಘಟನೆಗಳ ಮೂಲಕ ಕಟಾವು ಯಂತ್ರವನ್ನು ತಂದು ಕಟಾವು ಮಾಡಿಸಿದಲ್ಲಿ ಹೆಚ್ಚು ಲಾಭವಾಗಲಿದೆ.

Advertisement

ಒಟ್ಟಾರೆ  ಕಟಾವು ನಡೆಸಲು ವರುಣ ಕೃಪೆ ತೋರಿದ ಎನ್ನುವ ಸಂತಸ ಒಂದು ಕಡೆಯಾದರೆ, ದುಬಾರಿ ಬಾಡಿಗೆ, ಯಂತ್ರದ ಅಲಭ್ಯತೆಯ ಕೊರಗು ರೈತನನ್ನು  ಮತ್ತೆ ಕಾಡುತ್ತಿದೆ.

ಇಲಾಖೆಯಿಂದ 1,800 ರೂ. ನಿಗದಿ
ಕಟಾವು ಯಂತ್ರಕ್ಕೆ ಗಂಟೆಯೊಂದಕ್ಕೆ 1,800ರೂ. ಬಾಡಿಗೆ ಕೃಷಿ ಇಲಾಖೆ ನಿಗದಿಪಡಿಸಿದೆ. ಕಳೆದ ಬಾರಿ ಗಂಟೆಗೆ 1,600 ರೂ. ನಿಗದಿಪಡಿಸಿತ್ತು.  ಈ ಬಾರಿ 200ರೂ ಹೆಚ್ಚಿಸಿದೆ. ಇದಕ್ಕಿಂತ ಹೆಚ್ಚು ಬಾಡಿಗೆಯನ್ನು ನೀಡಬೇಡಿ ಎಂದು  ರೈತರಿಗೆ ಕಿವಿಮಾತು ಹೇಳುತ್ತಿದೆ.

ಹಬ್ಬ ಮುಗಿದ ತತ್‌ಕ್ಷಣ ಎಲ್ಲ  ರೈತರು ಒಟ್ಟಿಗೆ  ಕಟಾವಿಗೆ ಮುಂದಾಗಿರುವುದರಿಂದ ಯಂತ್ರದ ಬಾಡಿಗೆ ಹೆಚ್ಚಿದೆ. ಕಟಾವು ಯಂತ್ರಗಳು ಜಿಲ್ಲೆಗೆ ಆಗಮಿಸಿ ಹದಿನೈದು ದಿನ ಕಳೆದಿರುವುದರಿಂದ ಅವರಿಗೂ ಕೂಡ ಬಹಳಷ್ಟು ಸಮಸ್ಯೆಗಳಿವೆ.  ಆದರೆ ಬೇಡಿಕೆಯನ್ನೇ ಬಂಡವಾಳವಾಗಿಸಿಕೊಂಡು ರೈತರಿಂದ ಬಹಳಷ್ಟು ಹೆಚ್ಚಿಗೆ ಹಣ ಪಡೆಯುವುದು ಸರಿಯಲ್ಲ. ರೈತರ ಕೃಷಿ ವಿಧಾನದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡಲ್ಲಿ  ಕಟಾವಿನ ಖರ್ಚು ಕಡಿಮೆ ಮಾಡಿಕೊಳ್ಳಬಹುದು.
– ಶಿವಾನಂದ ಅಡಿಗ, ಮಣೂರು-ಕೋಟದ ಪ್ರಗತಿಪರ ಕೃಷಿಕ 

– ರಾಜೇಶ ಗಾಣಿಗ ಅಚಾÉಡಿ

Advertisement

Udayavani is now on Telegram. Click here to join our channel and stay updated with the latest news.

Next