Advertisement

ಆರೋಪಿಗಳ ರಕ್ಷಿಸುವಂತಿದೆ ಎಸಿಬಿ ನಡೆ; ಹೈಕೋರ್ಟ್‌ ತರಾಟೆ

12:55 PM Jul 22, 2022 | Team Udayavani |

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಲಂಚ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ವಿಳಂಬ ಮಾಡುತ್ತಿರುವುದಕ್ಕೆ ಎಸಿಬಿಯನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌, ಚಾರ್ಜ್‌ಶೀಟ್‌ ಸಲ್ಲಿಸಲು ಇಷ್ಟೊಂದು ವಿಳಂಬ ಮಾಡುತ್ತಿರುವುದು ಗಮನಿಸಿದರೆ ಎಸಿಬಿಯೇ ಪರೋಕ್ಷವಾಗಿ ಆರೋಪಿಗಳಿಗೆ ರಕ್ಷಣೆ ನೀಡುತ್ತಿರುವಂತೆ ತೋರುತ್ತಿದೆ ಎಂದು ಚಾಟಿ ಬೀಸಿತು.

Advertisement

ಪ್ರಕರಣದಲ್ಲಿ ಜಾಮೀನು ಕೋರಿ ಪಿ.ಎಸ್‌. ಮಹೇಶ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ಈ ವೇಳೆ ಎಸಿಬಿ ಪರ ವಕೀಲರು, ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿ ಬರಬೇಕಿತ್ತು.

ಆದ್ದರಿಂದ, ಆರೋಪ ಪಟ್ಟಿ ಸಲ್ಲಿಸಲಾಗಿಲ್ಲ ಎಂದು ಸಮಜಾಯಿಷಿ ನೀಡಲು ಮುಂದಾದರಾದರೂ, ಅದಕ್ಕೆ ಒಪ್ಪದ ನ್ಯಾಯಪೀಠ, ಮೊದಲು ಚಾರ್ಜ್‌ಶೀಟ್‌ ಸಲ್ಲಿಸಿ, ಆ ಬಳಿಕ ಸಿಆರ್‌ ಪಿಸಿ ಸೆಕ್ಷನ್‌ 173(8) ಬಳಕೆ ಮಾಡಿ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಅವಕಾಶವಿತ್ತಲ್ಲವೇ? ನಮ್ಮದು ಅತ್ಯಂತ ಸಮಗ್ರತೆಯುಳ್ಳ ಸಂಸ್ಥೆ ಎಂದು ಕೋರ್ಟ್‌ ಮುಂದೆ ಹೇಳಿಕೊಳ್ಳುತ್ತೀರಿ. 60 ದಿನಗಳ ಒಳಗೆ ಚಾರ್ಜ್‌ಶೀಟ್‌ ಸಲ್ಲಿಸಬೇಕೆಂದು ನಿಮಗೆ ತಿಳಿದಿಲ್ಲವೇ? ಇದು, ಆರೋಪಿಗೆ ನ್ಯಾಯಾಲಯದ ವ್ಯಾಪ್ತಿಯಿಂದ ಪಾರಾಗಲು ಸಹಕಾರ ನೀಡಿದಂತಲ್ಲದೆ ಮತ್ತೇನು ಎಂದು ಕಟುವಾಗಿ ಹೇಳಿತು.

ಎಸಿಬಿ ಪರ ವಕೀಲರು, ಜಾಮೀನು ಅರ್ಜಿ ಕುರಿತು ನಿರ್ಧರಿಸುವಂತೆ ಸುಪ್ರೀಂಕೋರ್ಟ್‌ ನೀಡಿದ್ದ ಆದೇಶದ ಕುರಿತು ನ್ಯಾಯಪೀಠಕ್ಕೆ ತಿಳಿಸಲು ಮುಂದಾದರು. ಅದಕ್ಕೆ ನ್ಯಾಯಮೂರ್ತಿಗಳು, ಸುಪ್ರೀಂಕೋರ್ಟ್‌ ಆದೇಶ ನನ್ನ ಬಳಿ ಇದೆ. ಜಾಮೀನು ಅರ್ಜಿ ವಿಚಾರಣೆ ನಡೆಸಿ, ಇತ್ಯರ್ಥಪಡಿಸುವಂತೆ ಆದೇಶಿಸಿದೆ. ಪ್ರಕರಣದಲ್ಲಿ ನೀವೇಕೆ ಆರೋಪ ಪಟ್ಟಿ ಸಲ್ಲಿಸಿಲ್ಲ ಎಂಬುದಕ್ಕೆ ಮೊದಲು ಉತ್ತರಿಸಿ. ಎಸಿಬಿಯ ಉದ್ದೇಶವಾದರೂ ಏನು, 60 ದಿನಗಳ ಒಳಗೆ ಚಾರ್ಜ್‌ಶೀಟ್‌ ಸಲ್ಲಿಸಬೇಕು ಎನ್ನುವುದು ನಿಮಗೆ ತಿಳಿದಿದೆ ತಾನೇ, ಹೀಗಿದ್ದರೂ ಆ ಕೆಲಸವೇಕೆ ಮಾಡಿಲ್ಲ. ಇದರರ್ಥ ನೀವು ಆರೋಪಿ ಜತೆ ಕೈಜೋಡಿಸಿದ್ದೀರಿ ಎಂದಲ್ಲವೇ ಎಂದು ಚಾಟಿ ಬೀಸಿದರು.

ತನಿಖಾಧಿಕಾರಿ 60 ದಿನದೊಳಗೆ ಏಕೆ ಆರೋಪ ಪಟ್ಟಿ ಸಲ್ಲಿಸಿಲ್ಲ ಎಂಬ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ಆದೇಶಿಸುತ್ತೇನೆ ಎಂದು ಎಚ್ಚರಿಸಿದ ಪೀಠ, ಅರ್ಜಿದಾರರ ಪರ ವಕೀಲರು ಹಾಜರಿಲ್ಲದ ಕಾರಣ, ಅವರಿಗೆ ಹಾಜರಾಗುವಂತೆ ಸೂಚಿಸಿ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿತ್ತು.

Advertisement

ಜಾಮೀನು ಅರ್ಜಿ ವಾಪಸ್‌: ಮಧ್ಯಾಹ್ನದ ಕಲಾಪದಲ್ಲಿ ಅರ್ಜಿ ವಿಚಾರಣೆ ಬಂದಾಗ ಅರ್ಜಿದಾರರ ಪರ ವಕೀಲರು ಹಾಜರಾಗಿ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ರಚಿಸಲಾಗಿರುವ ವಿಶೇಷ ನ್ಯಾಯಾಲಯ ಅರ್ಜಿದಾರರಿಗೆ “ಡಿಫಾಲ್ಟ್’ ಜಾಮೀನು ಮಂಜೂರು ಮಾಡಿದೆ. ಆದ್ದರಿಂದ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ವಾಪಸ್‌ ಪಡೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು. ಅದಕ್ಕೆ ನ್ಯಾಯಾಲಯ ಅನುಮತಿ ನೀಡಿತು.

ಉಪ ತಹಶೀಲ್ದಾರ್‌ಗೆ ಜಾಮೀನು
ಬೆಂಗಳೂರು: ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಉಪ ತಹಶೀಲ್ದಾರ್‌ ಪಿ.ಎಸ್‌.ಮಹೇಶ್‌ಗೆ ಜಾಮೀನು ದೊರೆತಿದೆ.

ಪ್ರಕರಣದ ದಾಖಲಾಗಿ 60 ದಿನ ಕಳೆದರೂ ಎಸಿಬಿ ಅಧಿಕಾರಿಗಳು ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ಎಸಿಬಿ ವಿಶೇಷ ನ್ಯಾಯಾಲಯವು ಆರೋಪಿ ಮಹೇಶ್‌ ಅವರಿಗೆ ಕಡ್ಡಾಯ ಜಾಮೀನು ಮಂಜೂರು ಮಾಡಿದೆ. ಪ್ರಕರಣ ನಡೆದು 60 ದಿನ ಕಳೆದರೂ ಎಸಿಬಿ ಅಧಿಕಾರಿಗಳು ಚಾರ್ಜ್‌ಶೀಟ್‌ ಸಲ್ಲಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next