Advertisement

ಎಸಿಬಿ ಬಲೆಗೆ ಭಲೇ ಕುಳಗಳು; ಬಿಡಿಎ,ಕೆಐಎಡಿಬಿ ಅಧಿಕಾರಿಗಳಿಗೆ ಶಾಕ್‌

06:00 AM Oct 06, 2018 | Team Udayavani |

ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಇಂಜಿನಿಯರ್‌ ಎನ್‌.ಜಿ.ಗೌಡಯ್ಯ ಮತ್ತು ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್‌.ಸ್ವಾಮಿ ಅವರ ಮನೆ ಮತ್ತು ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಅಪಾರ ಪ್ರಮಾಣದ ನಗದು, ಚಿನ್ನ, ಆಸ್ತಿ ದಾಖಲೆ ವಶಕ್ಕೆ ಪಡೆದಿದ್ದಾರೆ.

Advertisement

ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಎಸಿಬಿ ಐಜಿಪಿ ಚಂದ್ರಶೇಖರ್‌ ನೇತೃತ್ವದ 40 ಮಂದಿ ಅಧಿಕಾರಿಗಳ ಎರಡು ತಂಡಗಳು ಇಬ್ಬರು ಅಧಿಕಾರಿಗಳಿಗೆ ಸೇರಿದ ಮನೆಗಳು, ಕಚೇರಿಗಳು ಸೇರಿ 8 ಸœಳಗಳಲ್ಲಿ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ನಗದು ಮತ್ತು ಕೆಜಿಗಟ್ಟಲೇ ಚಿನ್ನ, ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದರು. ಅಲ್ಲದೆ, ಆಸ್ತಿಗಳಿಕೆಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್‌.ಸ್ವಾಮಿ ಅವರ ಮಲ್ಲೇಶ್ವರದಲ್ಲಿರುವ ಮಂತ್ರಿ ಗ್ರೀನ್ಸ್‌ ಅಪಾರ್ಟ್‌ಮೆಂಟ್‌ನ ಮನೆ, ಖನಿಜ ಭವನದಲ್ಲಿರುವ ಕಚೇರಿ ಹಾಗೂ ಬಿಡಿಎ ಇಂಜಿನಿಯರ್‌ ಎನ್‌.ಜಿ.ಗೌಡಯ್ಯ ಅವರ ಬಸವೇಶ್ವರನಗರದಲ್ಲಿರುವ ಮನೆ ಮತ್ತು ಕುಮಾರ ಪಾರ್ಕ್‌ನಲ್ಲಿರುವ ಬಿಡಿಎ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಇದೇ ವೇಳೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿರುವ ಗೌಡಯ್ಯ ಅವರ ಮಾವನ ಮನೆ ಮೇಲೂ ದಾಳಿ ನಡೆಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಗ್‌ ಬಿಸಾಡಿದರು:
ಎಸಿಬಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ 14ನೇ ಮಹಡಿಯಲ್ಲಿರುವ ತಮ್ಮ ಫ್ಲ್ಯಾಟ್‌ನಿಂದ ಹಣ, ಚಿನ್ನಾಭರಣ ಹಾಗೂ ದಾಖಲೆಗಳಿರುವ ಬ್ಯಾಗ್‌ ಒಂದನ್ನು ಬಿಸಾಡಿದ್ದರು. ಇದೇ ವೇಳೆ, 16ನೇ ಮಹಡಿಯ ಫ್ಲ್ಯಾಟ್‌ನಲ್ಲಿರುವ ಸ್ವಾಮಿ ಅವರ ಸಹೋದರಿ ಕೂಡ ಹಣ, ಚಿನ್ನಾಭರಣಗಳಿರುವ ಬ್ಯಾಗ್‌ ಅನ್ನು ಕೆಳಕ್ಕೆ ಬಿಸಾಡಿದ್ದರು. ಇವುಗಳಲ್ಲಿ 500 ಮತ್ತು 2000 ಮುಖಬೆಲೆಯ ಲಕ್ಷಾಂತರ ರೂ. ನಗದು ಹಾಗೂ ದಾಖಲೆಗಳು ಸಿಕ್ಕಿವೆ. ಅಲ್ಲದೆ, ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್‌ ಸ್ಥಳದಲ್ಲಿದ್ದ ಎರಡು ಕಾರುಗಳಲ್ಲಿ ಹಣ ಸಂಗ್ರಹಿಸಿಟ್ಟಿದ್ದ ಬ್ಯಾಗ್‌ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.

ದಾಳಿ ಕುರಿತು ಪ್ರತಿಕ್ರಿಯೆ ನೀಡಿದ ಎಸಿಬಿ ಐಜಿಪಿ ಚಂದ್ರಶೇಖರ್‌, ಬಸವೇಶ್ವರನಗರದಲ್ಲಿರುವ ಗೌಡಯ್ಯ ಮನೆ ಮತ್ತು ಮಲ್ಲೇಶ್ವರದ ಮಂತ್ರಿ ಗ್ರೀನ್ಸ್‌ ಅಪಾರ್ಟ್‌ಮೆಂಟ್‌ನಲ್ಲಿರುವ ಟಿ.ಆರ್‌.ಸ್ವಾಮಿ ಮನೆ ಮೇಲೆ ದಾಳಿ ನಡೆಸಲಾಗಿದೆ. ಎರಡು ತಂಡದ 40 ಮಂದಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಹಾಗೆಯೇ ಅವರ ಆಪ್ತರು ಹಾಗೂ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ. ದಾಳಿ ವೇಳೆ ನಗದು, ಚಿನ್ನಾಭರಣ ಹಾಗೂ ಕೆಲ ದಾಖಲೆಗಳು ಸಿಕ್ಕಿದ್ದು, ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದರು.

Advertisement

ದಾಳಿಯಲ್ಲಿ ಸಿಕ್ಕಿದ್ದೇನೇನು?
ಬಿಡಿಎ ಮುಖ್ಯ ಎಂಜನಿಯರ್‌ ಎನ್‌.ಜಿ.ಗೌಡಯ್ಯ:

– ಕುಟುಂಬಸ್ಥರ ಹೆಸರಿನಲ್ಲಿರುವ 2 ಮನೆ, 8 ನಿವೇಶನಗಳ ದಾಖಲೆ, 14 ಫ್ಲ್ಯಾಟ್‌ಗಳು, 3 ಕೆ.ಜಿ. ಚಿನ್ನ, 10 ಕೆ.ಜಿ.ಬೆಳ್ಳಿ, 3 ಕಾರುಗಳು, 3 ದ್ವಿಚಕ್ರ ವಾಹನಗಳು, 75 ಲಕ್ಷ ರೂ. ನಗದು ಹಾಗೂ ವಿವಿಧ ಬ್ಯಾಂಕ್‌ಗಳಲ್ಲಿದ್ದ 30 ಲಕ್ಷ ರೂ. ಠೇವಣಿ ಮತ್ತು ಇವರ ಮಾವನ ಮನೆಯಲ್ಲಿ 4.5ಕೆ.ಜಿ. ಚಿನ್ನಾಭರಣ.

ಟಿ.ಆರ್‌.ಸ್ವಾಮಿ , ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ
– ಕುಟುಂಬಸ್ಥರ ಮತ್ತು ಸಂಬಂಧಿಕರ ಹೆಸರಿನಲ್ಲಿ 8 ಮನೆ, 10 ನಿವೇಶನಗಳು, ವಿವಿಧೆಡೆ 10 ಎಕರೆ ಕೃಷಿ ಜಮೀನು,  1.6 ಕೆ.ಜಿ. ಚಿನ್ನ, 3 ಕಾರುಗಳು, 4.52 ಕೋಟಿ ರೂ. ನಗದು ಪತ್ತೆಯಾಗಿದ್ದು, ಜತೆಗೆ ಕೆಲ ದಾಖಲೆಗಳು.

Advertisement

Udayavani is now on Telegram. Click here to join our channel and stay updated with the latest news.

Next