ಬಳ್ಳಾರಿ (ಕಂಪ್ಲಿ): ಜಿಲ್ಲೆಯ ಕಂಪ್ಲಿ ಪಟ್ಟಣದ ಎಪಿಎಂಸಿ ಹತ್ತಿರದ ಕಟ್ಟಡದಲ್ಲಿ ಕೃಷಿ ಜಮೀನು ಬದಲಾವಣೆಗೆ ಸಂಬಂಧಿಸಿದಂತೆ ದೂರುದಾರರಿಂದ 20 ಸಾವಿರ ರೂ ಲಂಚದ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಗ್ರಾಪಂ ಪಿಡಿಒ, ಸದಸ್ಯ ಸೇರಿ ಮೂರು ಜನರನ್ನು ಬಂಧಿಸಿದ್ದಾರೆ.
ಪಟ್ಟಣದ ನಿವಾಸಿ ನಾರಯಣಸ್ವಾಮಿ ಎನ್ನುವವರು ನಂ10 ಮುದ್ದಾಪುರ ಗ್ರಾ.ಪಂ. ವ್ಯಾಪ್ತಿಯ ತಮ್ಮ ಜಮೀನನ್ನು ಎನ್ ಎ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದು, ಅರ್ಜಿ ಇತ್ಯರ್ಥಕ್ಕೆ ಪಿಡಿಒ, ಗ್ರಾ.ಪಂ ಸದಸ್ಯರು ಹಾಗೂ ಮುಖಂಡರೊಬ್ಬರು 25 ಸಾವಿರ ರೂ. ಲಂಚ ಬೇಡಿಕೆ ಇಟ್ಟಿದ್ದರು. ಇಂದು ಸಂಜೆ ನಾರಾಯಣಸ್ವಾಮಿ ಮಳಿಗೆಯಲ್ಲಿ 20 ಸಾವಿರ ರೂ. ಲಂಚದ ಹಣ ಪಡೆಯುವಾಗ ಬಳ್ಳಾರಿ ವಲಯದ ಎಸಿಬಿ ಎಸ್ಪಿ ಹರಿಬಾಬು ಮಾರ್ಗದರ್ಶನದಲ್ಲಿ ಡಿಎಸ್ಪಿ ವಿ.ಸೂರ್ಯನಾರಾಯಣರಾವು, ಪಿಐ ಪ್ರಭುಲಿಂಗಸ್ವಾಮಿ ಹಿರೇಮಠ ಮತ್ತು ಸಿಬ್ಬಂದಿಗಳು ದಾಳಿ ಮಾಡಿ ಗ್ರಾಪಂ ಪಿಡಿಒ ಬೀರಲಿಂಗ, ಗ್ರಾ.ಪಂ ಸದಸ್ಯ ಬಳ್ಳಾರಿ ಮಾಧವ ಮತ್ತು ಮುಖಂಡ ವಿಪ್ರದ ಭೀಮೇಶ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ದಾಳಿಯಲ್ಲಿ ಪಿಐ ಸುಂದರೇಶ ಹೊಳಣ್ಣನವರ್, ಹೆಚ್ ಸಿಗಳಾದ ಸತೀಶ್, ವಸಂತಕುಮಾರ್, ಪಿಸಿಗಳಾದ ದಿವಾಕರ್, ಪ್ರಕಾಶ್, ಯುವರಾಜಸಿಂಗ್, ಗೋವಿಂದ , ಕೃಷ್ಣ, ಚಂದ್ರಶೇಖರ್ ಭಾಗವಹಿಸಿದ್ದರು.