ನವದೆಹಲಿ: ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದ ಆರೋಪದಲ್ಲಿ ಜೈಲುವಾಸ ಅನುಭವಿಸುತ್ತಿದ್ದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಜಿ.ಎಸ್.ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿ, ಬಿಡುಗಡೆಗೆ ಆದೇಶ ನೀಡಿರುವ ಬಾಂಬೆ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ಶನಿವಾರ (ಅಕ್ಟೋಬರ್ 15) ತಡೆಯಾಜ್ಞೆ ನೀಡಿದೆ.
ಇದನ್ನೂ ಓದಿ:ಶಾಲೆಯಲ್ಲಿ ಬಲವಂತವಾಗಿ ಬಟ್ಟೆ ಬಿಚ್ಚಿಸಿದ ಶಿಕ್ಷಕಿ: ವಿದ್ಯಾರ್ಥಿನಿಯಿಂದ ಆತ್ಮಹತ್ಯೆಗೆ ಯತ್ನ
ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿರುವ ಮಹಾರಾಷ್ಟ್ರ ಸರ್ಕಾರದ ಅರ್ಜಿ ಕುರಿತು ಜಿಎನ್ ಸಾಯಿಬಾಬಾ ಮತ್ತು ಇತರ ಆರೋಪಿಗಳು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿ, ಈ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 8ಕ್ಕೆ ನಿಗದಿಪಡಿಸಿದೆ.
ಅನಾರೋಗ್ಯದ ಕಾರಣ ಮತ್ತು ದೈಹಿಕ ನ್ಯೂನತೆಯ ಕಾರಣದಿಂದ ತನ್ನನ್ನು ಗೃಹಬಂಧನದಲ್ಲಿ ಇರಿಸಬೇಕೆಂಬ ಜಿಎನ್ ಸಾಯಿಬಾಬಾ ಅವರ ಮನವಿಯನ್ನು ಸುಪ್ರೀಂಕೋರ್ಟ್ ನ ಜಸ್ಟೀಸ್ ಎಂಆರ್ ಶಾ ಮತ್ತು ಜಸ್ಟೀಸ್ ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠ ತಿರಸ್ಕರಿಸಿದೆ.
ನನ್ನ ಕಕ್ಷಿದಾರರು ಶೇ.90ರಷ್ಟು ವಿಕಲಚೇತನರಾಗಿದ್ದು, ಅನಾರೋಗ್ಯ ಸಮಸ್ಯೆಯೂ ಕಾಡುತ್ತಿದೆ. ಅವರು ತಿರುಗಾಡಲು ಗಾಲಿ ಕುರ್ಚಿ ಉಪಯೋಗಿಸುತ್ತಿದ್ದಾರೆ. ಈ ನೆಲೆಯಲ್ಲಿ ಗೃಹ ಬಂಧನದಲ್ಲಿ ಇರಿಸಬೇಕು ಎಂದು ಸಾಯಿಬಾಬಾ ಪರ ಹಿರಿಯ ವಕೀಲ ಬಸಂತ್ ಸುಪ್ರೀಂಗೆ ಮನವಿ ಮಾಡಿಕೊಂಡಿದ್ದರು.
ಆದರೆ ಸುಪ್ರೀಂ ಪೀಠ ಮನವಿಯನ್ನು ತಿರಸ್ಕರಿಸಿದ್ದು, ಮಾಜಿ ಪ್ರೊಫೆಸರ್ ಗಂಭೀರ ಅಪರಾಧದಲ್ಲಿ ಅಪರಾಧಿಯಾಗಿದ್ದಾರೆ ಎಂದು ತಿಳಿಸಿತ್ತು. ಮಾಜಿ ಪ್ರೊಫೆಸರ್ ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿ, ಬಿಡುಗಡೆಗೆ ಆದೇಶ ನೀಡಿದ್ದ ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.