Advertisement
ಈ ಸರಕಾರಿ ಶಾಲೆಯಲ್ಲಿ ಒಂದರಿಂದ ಏಳರ ವರೆಗೆ ತರಗತಿಗಳಿದ್ದು, 250ಕ್ಕೂ ಮಿಕ್ಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಹೆತ್ತವರ ಶಿಕ್ಷಣ ಪ್ರೇಮವನ್ನು ಮನಗಂಡು ಶಾಸಕ ಸಂಜೀವ ಮಠಂದೂರು ಮತ್ತು ಪಂ.ನ ಒಮ್ಮತದ ನಿರ್ಧಾರದಂತೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 30 ಲಕ್ಷ ರೂ. ಮತ್ತು ಶಾಸಕರ ನಿಧಿಯಿಂದ 20 ಲಕ್ಷ ರೂ. ಸಹಿತ ಒಟ್ಟು 50 ಲಕ್ಷ ರೂ. ವೆಚ್ಚದಲ್ಲಿ ಹವಾನಿಯಂತ್ರಿತ ಭೋಜನ ಶಾಲೆ ನಿರ್ಮಾಣ ಭರದಿಂದ ಸಾಗುತ್ತಿದೆ. 2020ರ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಲೋಕಾರ್ಪಣೆಗೊಳ್ಳಲಿದ್ದು, ಗ್ರಾಮಸ್ಥರಲ್ಲಿ ಸಂತಸ, ಅಚ್ಚರಿ ಮೂಡಿಸಿದೆ.
ಸರಕಾರ ಹಲವು ಯೋಜನೆಗಳು ಹೊರತಂದರೂ ಇಲ್ಲಿನ ಹೆತ್ತವರು ಆಂ.ಮಾ.ದತ್ತ ಹೆಚ್ಚು ಆಸಕ್ತರಾಗಿದ್ದರು. ಇದನ್ನು ಮನಗಂಡ ಪಂ. ಅಧ್ಯಕ್ಷ ಹಮ್ಮಬ್ಬ 2 ವರ್ಷಗಳಿಂದ ಇಲ್ಲೂ ಆಂ.ಮಾ. ವಿಭಾಗ ತೆರೆಯುವಂತೆ ಶಾಸಕರ ಮೂಲಕ ಒತ್ತಡ ಹೇರಿ ಯಶಸ್ವಿಯಾಗಿದ್ದರು. ಈಗ ಶಾಲೆಯಲ್ಲಿ ಪೋಷಕರ ಸಮಿತಿ ವತಿಯಿಂದ ಆಂ.ಮಾ. ಎಲ್‌ಕೆಜಿ, ಯುಕೆಜಿ, 1ನೇ ತರಗತಿಯಲ್ಲಿ ಆಂ.ಮಾ. ಆರಂಭವಾಗಿದ್ದು, ಮಕ್ಕಳ ಸಂಖ್ಯೆ ಏರಿಕೆಯಾಗುತ್ತಿದೆ. ಪಂ. ಅಧ್ಯಕ್ಷ ಹಮ್ಮಬ್ಬ ಶೌಕತ್ ಆಲಿ ನೇತೃತ್ವದಲ್ಲಿ ಶಾಲೆಯ ಆರ್ಥಿಕ ಸ್ಥಿತಿ ಸರಿದೂಗಿಸಲು ಸುಮಾರು 2 ಎಕ್ರೆ ಜಾಗದಲ್ಲಿ ಅಡಿಕೆ ಗಿಡಗಳನ್ನು ನೆಡಲಾಗಿದ್ದು, ಫಸಲು ಕೊಯಿಲಿನ ಹಂತದಲ್ಲಿದೆ. ಶಾಲೆಯ ಪೋಷಕರ, ಶಿಕ್ಷಕರ ಒಮ್ಮತದ ನಿರ್ಧಾರದಿಂದ ಇಂತಹ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ ಎಂದು ಶೌಕತ್ ಹೇಳುತ್ತಾರೆ. ನಾನು ಕಲಿತ ಸರಕಾರಿ ಶಾಲೆಗೆ ಹವಾನಿಯಂತ್ರಿತ ಭೋಜನ ಶಾಲೆ ನಿರ್ಮಿಸುವುದು ನನ್ನ ಕನಸಾಗಿತ್ತು. ಅದರಂತೆ ಪಂ., ಎಸ್‌ಡಿಎಂಸಿ ಸಹಕಾರದಿಂದ ನಿರ್ಮಾಣವಾಗುತ್ತಿದ್ದು, ಇದು ಪ್ರಾಯಃ ಜಿಲ್ಲೆಯಲ್ಲೇ ಪ್ರಥಮ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.