ಸಾಗರ: ಮಗನಿಂದಲೇ ಮನೆಯಿಂದ ಹೊರಗೆ ಹಾಕಲ್ಪಟ್ಟಿದ್ದ ವೃದ್ಧನಿಗೆ ಅಭೂತಪೂರ್ವ ಮಾನವೀಯತೆಯ ದರ್ಶನ ಸಾಗರದಲ್ಲಾಗಿದ್ದು, ಖುದ್ದು ಸಾಗರ ಉಪವಿಭಾಗದ ಸಹಾಯಕ ಆಯುಕ್ತೆ ನೆರವಿಗೆ ನಿಂತು ಶಿವಮೊಗ್ಗದ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ ಘಟನೆ ಬುಧವಾರ ನಡೆದಿದೆ.
ಬುಧವಾರ ಬೆಳಗ್ಗೆ ಚಳಿಯಲ್ಲಿ ರಸ್ತೆಯ ಮೇಲೆ ವಯೋವೃದ್ಧನೋರ್ವ ಅನಾಥವಾಗಿ ಅಸಹಾಯಕ ಸ್ಥಿತಿಯಲ್ಲಿ ನಗರದ ಪೊಲೀಸ್ ಠಾಣೆಯ ಎದುರು ಕುಳಿತಿರುವುದು ಕಂಡ ನಾಗರಿಕರು ಇಲ್ಲಿನ ಸಹೃದಯ ಸಂಘ ಸಂಸ್ಥೆಗಳ ಪ್ರಮುಖರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಮಾನವ ಹಕ್ಕುಗಳ ಕ್ಷೇಮಾಭಿವೃದ್ಧಿ ಸಂಘದ ಶಶಿಕಾಂತ್, ಜೈ ಜನ್ಮಭೂಮಿ ಸಂಘದ ಕಬೀರ್ ಚಿಪ್ಳಿ, ಸದ್ದಾಂ ದೊಡ್ಡಮನಿ, ಆರಿಫ್ ಮೊದಲಾದವರು ವಿಚಾರಿಸಿದಾಗ, ಮೂಲತಃ ಮೈಸೂರಿನವನಾದ ವೃದ್ಧನ ಹೆಸರು ಕೃಷ್ಣಪ್ಪ, ಆತನನ್ನು ಸ್ವಂತ ಮಗ ಮನೆಯಿಂದ ಹೊರಹಾಕಿದ್ದಾನೆ. ರೈಲಿನ ಮೂಲಕ ಆತ ಸಾಗರ ತಲುಪಿದ್ದಾನೆ ಎಂಬ ವಿಷಯ ಅರಿವಿಗೆ ಬಂದಿದೆ.
ಅನಾಥ ವೃದ್ಧನನ್ನು ಉಪವಿಭಾಗೀಯ ಕಚೇರಿಗೆ ಕರೆದೊಯ್ದಾಗ ತಕ್ಷಣ ಸ್ಪಂದಿಸಿದ ಎಸಿ ಪಲ್ಲವಿ ಸಾತೇನಹಳ್ಳಿ ವೈದ್ಯರನ್ನು ಕರೆಸಿ ಆರೋಗ್ಯ ತಪಾಸಣೆ ಮಾಡಿಸಿದರು. ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ, ಪುನರ್ವಸತಿ ಕೇಂದ್ರದಲ್ಲಿ ತಂಗಲು ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಿದರು.
ಈ ನಡುವೆ ನಗರಸಭೆ ಪೌರಾಯುಕ್ತ ನಾಗಪ್ಪ ಅವರಿಗೆ, ನಗರದ ವ್ಯಾಪ್ತಿಯಲ್ಲಿ ನಿರ್ಗತಿಕರು, ಮಾನಸಿಕ ಅಸ್ವಸ್ಥರು ಕಂಡುಬಂದಲ್ಲಿ ಅವರಿಗೆ ಸೂಕ್ತ ರಕ್ಷಣೆ ನೀಡಿ, ಪುನರ್ವಸತಿ ಕೇಂದ್ರಕ್ಕೆ ಬಿಡಲು ಎಸಿ ಸೂಚಿಸಿದರು.