ರಾಯಚೂರು: ಗ್ರಾಮೀಣ ಭಾಗದ ಶಾಲಾ- ಕಾಲೇಜು ವಿದ್ಯಾರ್ಥಿಗಳ ಓಡಾಡಕ್ಕೆ ಸಾಕಷ್ಟು ಅನಾನುಕೂಲ ವಾಗುತ್ತಿದ್ದು, ಕೂಡಲೇ ಹಳ್ಳಿಗಳಿಗೆ ಬಸ್ ಸಂಚಾರ ಆರಂಭಿಸುವಂತೆ ಆಗ್ರಹಿಸಿ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ಬಳಿಕ ಡಿಸಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕೋವಿಡ್ 2ನೇ ಅಲೆ ಮುಗಿದಿದ್ದು, ಎಲ್ಲೆಡೆ ಶಾಲಾ-ಕಾಲೇಜುಗಳು ಪುನಾರಂಭಗೊಂಡಿವೆ. ಶಾಲೆ- ಕಾಲೇಜುಗಳಿಗೆ ಬರಬೇಕಾದರೆ ಸರಿಯಾದ ಸಾರಿಗೆ ಸೌಲಭ್ಯವೇ ಇಲ್ಲ. ಇದರಿಂದ ಖಾಸಗಿ ವಾಹನಗಳು, ಇಲ್ಲವೇ ಕಾಲ್ನಡಿಗೆ ಮೂಲಕವೇ ಶಾಲೆಗೆ ಹೊಗಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ದೂರಿದರು.
ಕೂಡಲೇ ಎಲ್ಲ ಹಳ್ಳಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಬೇಕು, ಡಿಪ್ಲೊಮಾ, ಎಂಜಿನಿಯರಿಂಗ್, ಸ್ನಾತಕ ಹಾಗೂ ಸ್ನಾತಕೋತ್ತರ ತರಗತಿ ಹಾಗೂ ಪಿಎಚ್‌ಡಿ ಮಾಡುತ್ತಿರುವ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ, ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಬಿಡುಗಡೆಗೊಳಿಸಬೇಕು. ಬಡ ವಿದ್ಯಾರ್ಥಿಗಳಿಗೆ ಎದುರಾಗಿರುವ ವಸತಿ ನಿಲಯಗಳ ಸಮಸ್ಯೆ ನಿವಾರಿಸಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಬಸವ ಪ್ರಭು, ಪದಾ ಧಿಕಾರಿಗಳಾದ ಭರತಕುಮಾರ, ಪ್ರಮೀತಾ ಬಿ. ಜಯಶ್ರೀ, ಶ್ರೀಧರ ಹಾಗೂ ಕಾಲೇಜು-ವಿದ್ಯಾರ್ಥಿಗಳು ಇದ್ದರು.