Advertisement

ಶಾಲೆಗಳಲ್ಲಿ ಆಪ್ತಸಮಾಲೋಚಕ ನೇಮಕ

12:46 AM Feb 08, 2020 | Team Udayavani |

ಮಂಗಳೂರು: ಮಕ್ಕಳ ಭವಿಷ್ಯಕ್ಕೆ ಅಗತ್ಯವಾಗಿರುವ ಕೌಶಲ ರೂಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಯೂತ್‌ ಎಂಪವರ್‌ವೆುಂಟ್‌ ಪ್ಲಾಟ್‌ಫಾರಂ ರೂಪಿಸಿ, ಪ್ರತಿ ಶಾಲೆಗೆ ಆಪ್ತಸಮಾಲೋಚಕ (ಕೌನ್ಸೆಲರ್‌)ರನ್ನು ನೇಮಿಸಲಾಗುವುದು ಎಂದು ಉಪಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.

Advertisement

ನಗರದ ಪುರಭವನದಲ್ಲಿ ಶುಕ್ರವಾರ ಎಬಿವಿಪಿ 39ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಲ್ಲಿನ ಅವಕಾಶ, ಶೈಕ್ಷಣಿಕ ಸಾಲ, ಉದ್ಯೋಗಾವಕಾಶಗಳ ಅರಿವು, ಕೌಶಲ ತರಬೇತಿಗೆ ಆದ್ಯತೆ ನೀಡಿ ಮಕ್ಕಳನ್ನು ಸಶಕ್ತರನ್ನಾಗಿ ರೂಪಿಸುವುದು ಇದರ ಉದ್ದೇಶ ಎಂದರು.

ಬ್ಲೂ ಕಾಲರ್‌ಗಳಿಂದ ದೇಶ ಸದೃಢ
ದಕ್ಷಿಣ ಕೊರಿಯಾದಲ್ಲಿ ಶೇ. 90ಕ್ಕೂ ಹೆಚ್ಚು ಕೌಶಲಯುಕ್ತ ಮಾನವಶಕ್ತಿ ಇದೆ. ಆದರೆ ನಮ್ಮ ದೇಶದಲ್ಲಿ ಈ ಪ್ರಮಾಣ ಕೇವಲ ಶೇ. 2. ಯುವಕರು ವೈಟ್‌ ಕಾಲರ್‌ ಉದ್ಯೋಗದತ್ತಲೇ ಹೆಚ್ಚು ಆಕರ್ಷಿತರಾಗುತ್ತಿದ್ದಾರೆಯೇ ಹೊರತು ಬ್ಲೂ ಕಾಲರ್‌ ಕೆಲಸಗಳ ಬಗ್ಗೆ ಗಮನ ಹರಿಸುತ್ತಿಲ್ಲ. ದೇಶ ಸದೃಢವಾಗಬೇಕಾದರೆ ಬ್ಲೂ ಕಾಲರ್‌ ಕೆಲಸದತ್ತ ಆಸಕ್ತಿ ವಹಿಸಬೇಕು. ಇಂತಹ ಕೆಲಸಕ್ಕೆ ಬೇಕಾದ ಕೌಶಲಗಳನ್ನು ಶಾಲಾ ಹಂತದಲ್ಲಿಯೇ ಕಲಿಸಿಕೊಡುವ ನಿಟ್ಟಿನಲ್ಲಿ ಯೂತ್‌ ಎಂಪವರ್‌ವೆುಂಟ್‌ ಪ್ಲಾಟ್‌ಫಾರಂ ತೊಡಗಿಸಿಕೊಳ್ಳಲಿದೆ ಎಂದು ಡಾ| ಅಶ್ವತ್ಥ ನಾರಾಯಣ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ರಾಜ್ಯಪಾಲ ಪಿ.ಬಿ. ಆಚಾರ್ಯ ಮಾತನಾಡಿ, ಯುವ ಜನಾಂಗ ಕೆಲಸ ಹುಡುಕುವ ಬದಲು ಕೆಲಸ ನೀಡುವವರಾಗಬೇಕು. ಉದ್ಯೋಗದಾತರಾಗುವ ನಿಟ್ಟಿನಲ್ಲಿ ಬೇಕಾದ ಪೂರಕ ಕೌಶಲಗಳನ್ನು ರೂಢಿಸಿಕೊಳ್ಳಬೇಕು ಎಂದರು.

ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್‌. ಎಡಪಡಿತ್ತಾಯ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕೇ ಹೊರತು ದೇಶಕ್ಕೆ, ಸಮಾಜಕ್ಕೆ ತೊಂದರೆಯಾಗುವಂತಹ ಕೆಲಸ ಮಾಡ ಬಾರದು. ಅಂತಹ ವಿಚಾರಗಳಿಗೆ ನಮ್ಮ ವಿ.ವಿ.ಯಲ್ಲಿ ಅವಕಾಶವಿಲ್ಲ ಎಂದರು.

Advertisement

ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಶಿಶ್‌ ಚೌಹಾನ್‌ ಮಾತನಾ ಡಿದರು. ಎಬಿವಿಪಿ ರಾಜ್ಯಾಧ್ಯಕ್ಷ ಡಾ| ಅಲ್ಲಮ ಪ್ರಭು ಗುಡ್ಡ, ಸ್ವಾಗತ ಸಮಿತಿ ಪ್ರ. ಕಾರ್ಯದರ್ಶಿ ಶಾಂತಾರಾಮ ಶೆಟ್ಟಿ,ಮಹಾಲಕ್ಷ್ಮೀ, ಶ್ರೀನಿಧಿ ಹೆಗ್ಡೆ ಉಪಸ್ಥಿತ ರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಕೆ.ಸಿ. ನಾೖಕ್‌ ಸ್ವಾಗತಿಸಿದರು. ಸಂಚಾಲಕ ಕೇಶವ ಬಂಗೇರ ಅತಿಥಿಗಳ ಪರಿಚಯಿಸಿದರು. ಎಬಿವಿಪಿ ರಾಜ್ಯ ಕಾರ್ಯದರ್ಶಿ ಹರ್ಷ ನಾರಾಯಣ ನಿರೂಪಿಸಿದರು.

ಅಂದು ಬೇಕೆಂದವರು ಈಗ ಬೇಡವೆನ್ನುತ್ತಿದ್ದಾರೆ!
ಕೆಲವು ಪಕ್ಷ ಹಾಗೂ ಸಂಘಟನೆಗಳು ತಮ್ಮ ಸ್ವಾರ್ಥ ಮತ್ತು ದೇಶದ ಅಭಿವೃದ್ಧಿಯಾಗಬಾರದು ಎಂಬ ಚಿಂತನೆಯೊಂದಿಗೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಬೇಕು ಎಂದು ಒಂದು ಕಾಲದಲ್ಲಿ ಹೋರಾಡಿದ್ದವರು ಪ್ರಸ್ತುತ ಅದನ್ನು ವಿರೋಧಿಸುತ್ತಿದ್ದಾರೆ. ಈ ಮೂಲಕ ಜನರ ದಿಕ್ಕು ತಪ್ಪಿಸುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಡಾ| ಅಶ್ವತ್ಥ ನಾರಾಯಣ ಹೇಳಿದರು.

ಅಕ್ಷರ ಸಂತನಿಗೆ ಸನ್ಮಾನ
ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಉಪಮುಖ್ಯಮಂತ್ರಿ ಸಮ್ಮಾನಿಸಿದರು. ಸಮ್ಮಾನಕ್ಕೂ ಮುನ್ನ ಹಾಜಬ್ಬರನ್ನು ಪರಿಚಯಿಸುತ್ತಿದ್ದಂತೆ ಸೇರಿದ ವಿದ್ಯಾರ್ಥಿಗಳು ಭಾರೀ ಚಪ್ಪಾಳೆ, ಹರ್ಷೋದ್ಘಾರದೊಂದಿಗೆ ಹಾಜಬ್ಬರನ್ನು ಗೌರವಿಸಿದರು.

ಫೆ. 9ರಂದು ಸಮಾರೋಪ
ಸಮ್ಮೇಳನವು ಫೆ. 9ರಂದು ಸಂಪನ್ನಗೊಳ್ಳಲಿದೆ. ಫೆ. 8ರಂದು ನಗರದ ಪ್ರಮುಖ ಬೀದಿಗಳಲ್ಲಿ ಸಮ್ಮೇಳನದ ಶೋಭಾಯಾತ್ರೆ, ರಥಬೀದಿಯಲ್ಲಿ ಸಾರ್ವಜನಿಕ ಸಭೆಯ ದಿಕ್ಸೂಚಿ ಭಾಷಣ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next