ವಿಜಯಪುರ: ರಾಜ್ಯದ ಹಾಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್ ಪಾಸ್ ನೀಡಲು ನಿರ್ಧರಿಸಿದೆ. ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೂ ಸರ್ಕಾರ ಉಚಿತ ಬಸ್ ಪಾಸ್ ವಿತರಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಶನಿವಾರ ನಗರದ ಮಹಾತ್ಮ ಗಾಂಧೀಜಿ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ನಗರದಲ್ಲಿರುವ ಜಿಲ್ಲಾ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿ, ರಾಜ್ಯ ಸರಕಾರದ ವಿರುಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಸಾರಿಗೆ ಸಂಸ್ಥೆ ಅಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ, ರಾಜ್ಯ ಸರ್ಕಾರ ವಿದ್ಯಾರ್ಥಿಗಳನ್ನು ಒಡೆದಾಳುವ ಕ್ರಮಕ್ಕೆ ಮುಂದಾಗಿದೆ. ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್ ಪಾಸ್ ವಿತರಿಸುವ ಮೂಲಕ ಸರ್ಕಾರವೇ ಸಮಾಜದಲ್ಲಿ ವಿದ್ಯಾರ್ಥಿಗಳಲ್ಲಿ ಜಾತಿಯ ತಾರತಮ್ಯದ ವಿಷ ಬೀಜ ಬಿತ್ತಲು ಮುಂದಾಗಿದೆ. ಇದರಿಂದ ಇತರೆ ಸಮುದಾಯದ ಬಡ ಮಕ್ಕಳಿಗೆ ಸರ್ಕಾರವೇ ಅನ್ಯಾಯ ಮಾಡುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಅತೃಪ್ತಿಯ ಅಸಮಾಧಾನ ಹುಟ್ಟು ಹಾಕಿ ಸಮಾಜಕ್ಕೆ ನಕಾರಾತ್ಮಕ ಸಂದೇಶ ರವಾನಿಸಲು ಮುಂದಾಗಿದೆ. ಸರ್ಕಾರದ ಈ ಕ್ರಮಕ್ಕೆ ವಿದ್ಯಾರ್ಥಿ ಸಮೂಹ ಖಂಡಿಸುತ್ತದೆ. ಜೊಗೆಗೆ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತವಾಗಿಯೇ ಬಸ್ ಪಾಸ್ ವಿತರಿಸಬೇಕು ಎಂದು ಆಗ್ರಹಿಸಿದರು.
ಬಸ್ ಪಾಸ್ ಪಡೆಯುವ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ರೈತರ ಮಕ್ಕಳೆ ಹೆಚ್ಚು ಬಸ್ ಪಾಸ್ ಪಡೆಯುತ್ತಾರೆ. ಆದರೆ ಈ ಸರಕಾರ ಉಚಿತವಾಗಿ ಬಸ್ ಪಾಸ್ ನೀಡುತ್ತಿಲ್ಲ. ಕೂಡಲೆ ಹಿಂದಿನ ಸರಕಾರ ಮಂಡಿಸಿದಂತೆ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕೆಂದು ಆಗ್ರಹಿಸಿದರು.
ರಾಜ್ಯದ ಪ್ರಸಕ್ತ ವರ್ಷದಲ್ಲಿ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಬಸ್ ಪಾಸ್‌ಗಾಗಿ ಅರ್ಜಿ ಸಲ್ಲಿಸುವರಿದ್ದಾರೆ. ಆದರೆ ಹಿಂದಿನ ರಾಜ್ಯ ಸರಕಾರ ಅಂದಿನ ಅಂಕಿ ಅಂಶಗಳ ಪ್ರಕಾರ 19.60 ಲಕ್ಷ ವಿದ್ಯಾರ್ಥಿಗಳಿಗೆ 836.96 ಕೋಟಿ ರೂ. ಅನುದಾನ ಮಾತ್ರ ಬಿಡುಗಡೆಗೊಳಿಸಿದೆ. ಇಂದಿನ ಅಂಕಿ ಅಂಶಗಳ ಪ್ರಕಾರ ಹೆಚ್ಚುವರಿಯಾಗಿ 629.32 ಕೋಟಿ ರೂ. ಅನುದಾನವನ್ನು ಸರಕಾರ ಬಿಡುಗಡೆ ಮಾಡಿದೆ.
ಈ ವಿಷಯಕ್ಕೆ ಸಂಬಂಧಿಸದಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಹಣಕಾಸು ಇಲಾಖೆ ಪತ್ರದ ಮೂಲಕ ಅನುದಾನ ಕೇಳಿದಾಗ ಹಣಕಾಸು ಇಲಾಖೆ ಅದನ್ನು ನಿರಾಕರಿಸಿದೆ. ಸರ್ಕಾರದ ಈ ಕ್ರಮ ಖಂಡನಾರ್ಹ ಎಂದು ಎಬಿವಿಪಿ ಜಿಲ್ಲಾ ಸಹ ಸಂಚಾಲಕ ಸಚೀನ ಕೊಳಗೇರಿ ಮಾತನಾಡಿದರು.
ರಾಜ್ಯದ ಈಗಿನ ಮುಖ್ಯಮಂತ್ರಿಗಳು ತಮ್ಮ ಭಾಷಣದ ಉದ್ದಕ್ಕೂ ನಾನು ರೈತರ ಪರವಾಗಿದ್ದೇನೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಆದರೆ ಹಿಂದಿನ ಕಾಂಗ್ರೆಸ್ ಸರಕಾರದ ಸಿದ್ದರಾಮಯ್ಯ ಸರಕಾರ ಮಂಡಿಸಿದ ಬಜೆಟ್‌ನಲ್ಲಿಯೂ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಘೋಷಣೆ ಮಾಡಿದ್ದರು.
ನಗರ ಕಾರ್ಯದರ್ಶಿ ಸಚಿನ ಬಾಗೇವಾಡಿ, ಶ್ರೀಕಾಂತ ಬಿರಾದಾರ, ವಿನೋದ ಮನ್ನೊಡರ, ಐಶ್ವರ್ಯ ರಾಠೊಡ, ಶಿವಲೀಲಾ ಡೆಂಗಿ, ವಿಜಯಲಕ್ಷ್ಮೀ ಕೋಚವಾಡ, ಪ್ರೇಮಾ ಹೀರೇಮಠ, ಆಕ್ಷತಾ ಮುಚ್ಚಂಡಿ, ರಜಿಯಾ ಬಾಗವಾನ,
ಮದುಕುಂಬಾರ ಇದ್ದರು.