ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವನ್ನು ಉಳಿಸುವ ನಿಟ್ಟಿನಲ್ಲಿ ಸರ್ವಪಕ್ಷದ ಸಭೆ ಕರೆಯುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಯೋಗ ರಾಜ್ಯಪಾಲರಿಗೆ ಮನವಿ ಮಾಡಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸೋಮವಾರ ನಗರದ ಶಾಸಕರ ಭವನದಲ್ಲಿ ದುಂಡುಮೇಜಿನ ಸಭೆ ನಡೆಯಿತು. ತಾವು ಮಧ್ಯಪ್ರವೇಶ ಮಾಡಿ, ಸಮಸ್ಯೆಗೆ ಶೀಘ್ರವೇ ಪರಿಹಾರ ನೀಡಬೇಕು ಎಂಬ ನಿಟ್ಟಿನಲ್ಲಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಎಬಿವಿಪಿ ನಿಯೋಗ ರಾಜ್ಯಪಾಲರಿಗೆ ಮನವಿ ರೂಪದಲ್ಲಿ ಸಲ್ಲಿಸಿದೆ.
ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಮುಕ್ತ ವಿವಿ ಉಳಿಸುವ ನಿಟ್ಟಿನಲ್ಲಿ ಸರ್ಕಾರ ತಕ್ಷಣವೇ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವಪಕ್ಷದ ಸಭೆ ಕರೆಯಬೇಕು. ಕಳೆದ 10 ವರ್ಷಗಳ ಅವಧಿಯ ವಿಶ್ವವಿದ್ಯಾಲಯದ ಹಣಕಾಸು ಪರಿಸ್ಥಿತಿ, ಆಡಳಿತ ಮಂಡಳಿಯ ನಿರ್ಧಾರದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಮುಕ್ತ ವಿವಿಯಲ್ಲಿ ನಡೆದಿರುವ ಅಂಕಪಟ್ಟಿ ಹಗರಣ, ಕುಲಪತಿಗಳ ನೇಮಕಾತಿಯಲ್ಲಿನ ಭ್ರಷ್ಟಾಚಾರ ಹಾಗೂ ಹಣಕಾಸಿನ ಅವ್ಯವಹಾರಗಳ ತನಿಖೆ ನಡೆಸಬೇಕು. ಅಗತ್ಯಬಿದ್ದರೆ ಸಿಬಿಐಗೆ ಒಪ್ಪಿಸಬೇಕು. ಯುಜಿಸಿಯಿಂದ ಮುಕ್ತ ವಿವಿಗೆ ಮಾನ್ಯತೆ ಕೊಡಿಸಲು ರಾಜ್ಯ ಸರ್ಕಾರವೇ ನೇತೃತ್ವ ವಹಿಸಬೇಕು ಎಂಬ ನಿರ್ಧಾರವನ್ನು ದುಂಡು ಮೇಜಿನ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯವರಿಗೆ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ಹಾಗೂ ಪ್ರಾಮಾಣಿಕತೆ ಇದ್ದರೆ ಯುಜಿಸಿಯಿಂದ ಮುಕ್ತ ವಿವಿಗೆ ಮಾನ್ಯತೆ ಕೊಡಿಸಬೇಕು. ವಿವಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ವಿವಿಯನ್ನು ಮುಚ್ಚುವ ಯಾವ ಅಧಿಕಾರವೂ ನಿಮಗೆ ಇಲ್ಲ ಎಂದು ದುಂಡುಮೇಜಿನ ಸಭೆಯಲ್ಲಿ ವಿದ್ಯಾರ್ಥಿಗಳು, ತಜ್ಞರು, ಪ್ರಾಧ್ಯಾಪಕರು ಆಗ್ರಹಿಸಿದರು.
ವಿಶ್ರಾಂತ ಕುಲಪತಿಗಳಾದ ಪ್ರೊ.ರಾಮೇಗೌಡ, ಪ್ರೊ.ಚಂಬಿ ಪುರಾಣಿಕ, ಡಾ.ಬಲವಿರೆಡ್ಡಿ, ಪ್ರೊ. ಮುನಿಯಮ್ಮ, ಎಬಿವಿಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ, ಪ್ರಾಂತ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರಳಾಪೂರ ಸೇರಿದಂತೆ ಶಿಕ್ಷಣ ತಜ್ಞರು, ಪ್ರಾಧ್ಯಾಪಕರು ಸಭೆಯಲ್ಲಿ ಇದ್ದರು.
ರಾಜ್ಯ ಸರ್ಕಾರ ತಕ್ಷಣವೇ ಮುಕ್ತ ವಿವಿಯ ಮಾನ್ಯತೆ ನವೀಕರಣ ಮಾಡಿಸಬೇಕು. 2013-14ರಲ್ಲಿ 49,675 ಹಾಗೂ 2014-15ರಲ್ಲಿ 46,178 ವಿದ್ಯಾರ್ಥಿಗಳು ಈ ವಿವಿಯಲ್ಲಿ ವಿವಿಧ ಪದವಿಗೆ ದಾಖಲಾಗಿದ್ದಾರೆ. ಇದರ ಜತೆಗೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರದಲ್ಲಿದೆ. ಸರ್ಕಾರ ಹೆಚ್ಚಿನ ಕಾಳಜಿವಹಿಸಿ ಯುಜಿಸಿ ಮೂಲಕ ಮಾನ್ಯತೆ ನವೀಕರಿಸಬೇಕು.
-ಪ್ರೊ.ಪಿ.ವಿ.ಕೃಷ್ಣಭಟ್, ಶಿಕ್ಷಣ ತಜ್ಞ