ಬೆಂಗಳೂರು: ಮಹಿಳೆಯೊಬ್ಬರು ನಿಂದಿಸಿದರು ಎಂಬ ಕಾರಣಕ್ಕೆ ಆಕ್ರೋಶಗೊಂಡಿದ್ದ ವ್ಯಕ್ತಿಯೊಬ್ಬ ಪ್ರತಿಕಾರ ತೀರಿಸಿಕೊಳ್ಳುವ ಸಲುವಾಗಿ ಆಕೆಯ ಆರು ವರ್ಷದ ಗಂಡು ಮಗುವನ್ನು ನೀರಿನ ಸಂಪ್‌ಗೆ ತಳ್ಳಿ ಕೊಂದಿದ್ದಾನೆ. ಶನಿವಾರ ಬೆಳಗ್ಗೆ 9 ಗಂಟೆಯಲ್ಲಿ ಈ ಘಟನೆ ನಡೆದಿದ್ದು, ಕೇವಲ ಒಂದೇ ತಾಸಿನಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಹೂ ವ್ಯಾಪಾರಿ ಮಹೇಶ್ (21) ಬಂದಿತ ಆರೋಪಿ. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಮರಿಯನಪಾಳ್ಯ ನಿವಾಸಿ ಜೇಮ್ಸ್ ಮತ್ತು ಅನಿತಾ ಮೇರಿ ದಂಪತಿ ಪುತ್ರ ಮನೋಜ್ (6) ಮೃತ ಬಾಲಕ. ಅನಿತಾ ಮೇರಿ ಎರಡು ದಿನಗಳ ಹಿಂದಷ್ಟೇ ಮರಿಯಪ್ಪನಪಾಳ್ಯದಿಂದ ಮಗುವಿನೊಂದಿಗೆ ಬಿಳೇಕಳ್ಳಿಯ ತಮ್ಮ ತಾಯಿ ಮನೆಗೆ ಬಂದಿದ್ದರು. ಇವರ ನೆರೆಮನೆಯಲ್ಲೇ ಇರುವ ಆರೋಪಿ ಮಹೇಶ್ ಅನಿತಾ ಮೇರಿ ಅವರ ತಾಯಿ ಜತೆ ಹೂ ವ್ಯಾಪಾರ ಮಾಡಿಕೊಂಡಿದ್ದಾನೆ.
ಮಹೇಶ ಶನಿವಾರ ಬೆಳ್ಳಂಬೆಳಗ್ಗೆಯೇ ಹೂ ಕೀಳುವುದಕ್ಕಾಗಿ ಅನಿತಾ ಮೇರಿ ಅವರ ತಾಯಿಯ ಮನೆ ಬಾಗಿಲು ಬಡಿದ್ದಾನೆ. ಬೆಳಗ್ಗೆ ಬಾಗಿಲು ಬಡಿದು ಮನೆಯವರ ನಿದ್ರೆಗೆ ತೊಂದರೆ ನೀಡಿದ್ದಕ್ಕಾಗಿ ಆಕ್ರೋಶಗೊಂಡ ಅನಿತಾ ಮೇರಿ, ಮಹೇಶ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇದರಿಂದ ಮಹೇಶ ಅವಮಾನಿತನಾಗಿದ್ದ. ನಿಮಗೊಂದು ಗತಿ ಕಾಣಿಸುತ್ತೇನೆ ಎಂದು ಹೇಳಿ ಹೋಗಿದ್ದ.
ಬೆಳಗ್ಗೆ 8 ಗಂಟೆಯಲ್ಲಿ ಮನೆ ಮುಂದೆ ಆಟ ಆಡುತ್ತಿದ್ದ ಅನಿತಾ ಮೇರಿ ಪುತ್ರ ಮನೋಜ್‌ನನ್ನು ಚಾಕೋಲೇಟ್ ಕೊಡಿಸುವ ನೆಪದಲ್ಲಿ ಕರೆದೊಯ್ದ ಮಹೇಶ, ನಂತರ ಮನೆ ಮುಂದಿನ ನಿರ್ಮಾಣ ಹಂತದ ಕಟ್ಟಡದ ಸಂಪ್‌ಗೆ ತಳ್ಳಿ ಬಾಗಿಲು ಮುಚ್ಚಿ ಪರಾರಿಯಾಗಿದ್ದ. ಇತ್ತ 11 ಗಂಟೆ ಸುಮಾರಿಗೆ ಮಗುವಿಗೆ ಸ್ನಾನ ಮಾಡಿಸಲು ಮನೋಜ್‌ನನ್ನು ಮೇರಿ ಹುಡುಕಾಡಿದ್ದಾರೆ. ಎಲ್ಲಿಯೂ ಪತ್ತೆಯಾಗಿಲ್ಲ. ಸ್ಥಳೀಯರೊಬ್ಬರು ಮಹೇಶ್ ಜತೆ ಮನೋಜ್ ಹೋಗಿದ್ದನ್ನು ಕಂಡಿದ್ದರು. ಈ ಬಗ್ಗೆ ಮಹೇಶ್‌ನನ್ನು ವಿಚಾರಿಸಿದಾಗ ನನಗೇನು ಗೊತ್ತಿಲ್ಲ ಎಂದು ಹೇಳಿದ್ದ.
ಬಾಯಿಬಿಟ್ಟ ಆರೋಪಿ: ಮನೋಜ್ ನಾಪತ್ತೆ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರಿಗೆ ಸ್ಥಳೀಯರು ಮಹೇಶ್‌ನನ್ನು ಅನುಮಾನದ ಮೇರೆಗೆ ಹಿಡಿದುಕೊಟ್ಟಿದ್ದರು. ನಂತರ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಮನೋಜ್ ತಾಯಿ ತನನ್ನು ನಿಂದಿಸಿದಕ್ಕೆ ಕೋಪಗೊಂಡು ಮನೋಜ್‌ನನ್ನು ನೀರಿನ ಸಂಪ್‌ನಲ್ಲಿ ಹಾಕಿ ಕೊಂದಿರುವುದಾಗಿ ತಪ್ಪೊಪ್ಪಿಕೊಂಡ. ನಂತರ ತಾನೆ ಆ ಸಂಪ್ ಅನ್ನು ಪೊಲೀಸರಿಗೆ ತೋರಿಸಿದ್ದ. ಸಂಪ್‌ನಲ್ಲಿ ಮನೋಜ್‌ನ ಮೃತದೇಹ ಸಿಕ್ಕಿತ್ತು.
ಆರೋಪಿ ವಿರುದ್ಧ ಈ ಹಿಂದೆಯೂ ದೂರು: ಮಹೇಶ್ ತಾನು ನೆಲೆಸಿದ್ದ ಪ್ರದೇಶದ ಸ್ಥಳೀಯರು ಹಾಗೂ ಕೆಲ ಮಹಿಳೆಯರ ಜತೆ ಅನುಚಿತವಾಗಿ ವರ್ತಿಸುತ್ತಿದ್ದ. ಈ ಬಗ್ಗೆ ಕೆಲವರು ಮೌಖೀಕವಾಗಿ ದೂರು ನೀಡಿದ್ದರು. ಆಗ ಠಾಣೆಗೆ ಕರೆತಂದು ಬೈದು ಬುದ್ಧಿವಾದ ಹೇಳಿ ಕುಳುಹಿಸುತ್ತಿದ್ದೇವು. ಆದರೆ, ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.