ಮಂಡ್ಯ: ಆರ್‌ಟಿಐ ಕಾಯಿದೆಯನ್ನು ದುರುಪಯೋಗಪಡಿಸಿಕೊಂಡು ಅಧಿಕಾರಿಗಳು ಹಾಗೂ ನೌಕರರನ್ನು ಹಿಂಸಿಸುತ್ತಿರುವವರ ವಿರುದ್ಧ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್. ಶಂಭೂಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಕೆಲ ದುಷ್ಟ ವ್ಯಕ್ತಿಗಳು ಆರ್‌ಟಿಐ ಕಾರ್ಯಕರ್ತರ ವೇಷದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರನ್ನು ಬೆದರಿಸಿ ತೇಜೋವಧೆ ಮಾಡುತ್ತಾ ಹಣ ವಸೂಲಿ ಮಾಡುವ ದಂಧೆಯನ್ನು ವ್ಯಾಪಕವಾಗಿ ನಡೆಸುತ್ತಿದ್ದಾರೆ. ಆ ವ್ಯಕ್ತಿಗಳು ತಮ್ಮದೇ ಕೂಟವನ್ನು ಕಟ್ಟಿಕೊಂಡು ಪ್ರತಿನಿತ್ಯ ಒಂದಲ್ಲಾ ಒಂದು ಕಚೇರಿಗೆ ಆರ್‌ಟಿಐ ಅರ್ಜಿ ಹಾಕುತ್ತಾ, ಆಡಳಿತ ನಿರ್ವಹಣೆಗೆ ಆತಂಕಕಾರಿಯಾಗಿದ್ದಾರೆಂದು ಜಿಲ್ಲಾ ನೌಕರರ ಸಮಿತಿ ಪದಾಧಿಕಾರಿಗಳು ದೂರಿದರು.
ಹಣ ವಸೂಲಿ ದಂದೆ: ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಉದ್ಯಾನ, ಸುಭಾಷ್‌ನಗರ, ವಿದ್ಯಾನಗರ ಹಾಗೂ ಅಶೋಕನಗರ ಉದ್ಯಾನಗಳನ್ನು ಕಾರ್ಯಕ್ಷೇತ್ರಗಳನ್ನಾಗಿ ಮಾಡಿಕೊಂಡಿದ್ದಾರೆ. ಅಧಿಕಾರಿ ಹಾಗೂ ನೌಕರರಿಂದ ಹಣ ವಸೂಲಿ ಮಾಡಲು ಕೆಲವು ಇಲಾಖಾ ನೌಕರರನ್ನು ಪಾಲುದಾರರನ್ನಾಗಿ ಮಾಡಿಕೊಂಡಿದ್ದಾರೆ. ಅಲ್ಲದೆ, ಕೆಲ ನಿವೃತ್ತ ಪೊಲೀಸ್ ಸಿಬ್ಬಂದಿಯನ್ನೂ ಸಹ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆರೇಳು ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿರುವ ದುಷ್ಟ ವ್ಯಕ್ತಿಗಳು ಪೊಲೀಸರೇ ನಮಗೆ ಹೆದರುತ್ತಾರೆಂದು ರಾಜಾರೋಷವಾಗಿ ಹೇಳಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಬೆದರಿಕೆ ಒಡ್ಡುವುದು: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿ ಸಲ್ಲಿಸುವ ಅರ್ಜಿಗೆ ಸಂಬಂಧಿಸಿದ ಇಲಾಖೆ ಹಾಗೂ ಅಧಿಕಾರಿಗಳನ್ನು ಮಾಹಿತಿ ನೀಡಲು ಹಣ ಪಾವತಿ ಮಾಡಿ, ಮಾಹಿತಿ ಪಡೆಯಲು ತಿಳಿಸಿದರೆ, ಮತ್ತೂಮ್ಮೆ ಮುಂದುವರಿದು ತನಿಖಾ ಸಂಸ್ಥೆಗಳಿಗೆ ಈ ಬಗ್ಗೆ ದೂರು ನೀಡುವುದಾಗಿ ಬೆದರಿಕೆ ಒಡ್ಡುವುದು ಹಾಗೂ ಮಾನಸಿಕವಾಗಿ ಅಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸುವ ವಾತಾವರಣ ಸೃಷ್ಟಿಮಾಡುತ್ತಿದ್ದಾರೆ ಎಂದರು.
ಕ್ರಮಕ್ಕೆ ಮನವಿ: ಈ ವ್ಯಕ್ತಿಗಳು ನಿರಂತರವಾಗಿ ಆರ್‌ಟಿಐ ದುರಪಯೋಗಪಡಿಸಿಕೊಂಡು ಅರ್ಜಿ ಹಾಕಿ ಲಕ್ಷಗಟ್ಟಲೆ ಹಣ ವಸೂಲಿ ಮಾಡುತ್ತಿದ್ದಾರೆ. ಹಣ ನೀಡದ ಅಧಿಕಾರಿ ಮತ್ತು ನೌಕರರನ್ನು ತೇಜೋವಧೆ ಮಾಡುತ್ತಾ, ನಾನಾ ರೀತಿಯಲ್ಲಿ ಕಾಡುತ್ತಿದ್ದಾರೆ. ಈ ಸಂಬಂಧ ನೊಂದ ಅಧಿಕಾರಿಗಳು ಸಂಘದ ಗಮನಕ್ಕೆ ತಂದಿದ್ದು, ತಾವುಗಳು ದುಷ್ಟ ವ್ಯಕ್ತಿಗಳ ವಿಚಾರಣೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಪ್ರಸನ್ನ, ಕೆ.ಬಿ. ಕೃಷ್ಣ, ಎಚ್.ಎಸ್. ಕೃಷ್ಣಪ್ಪ, ದೊಡ್ಡಯ್ಯ, ರಮೇಶ್, ತಮ್ಮೇಗೌಡ, ಚಂದ್ರೇಗೌಡ ಇತರರು ಹಾಜರಿದ್ದರು.