Advertisement

ಅಧಿಕಾರ ದುರುಪಯೋಗ : ಕ್ರೈಂಬ್ರಾಂಚ್‌ ಇನ್ಸ್‌ಪೆಕ್ಟರ್‌ ವಜಾ

08:22 PM Mar 11, 2023 | Team Udayavani |

ಕಾಸರಗೋಡು: ಅಧಿಕಾರ ದುರುಪಯೋಗ ಗೈದ ಹಾಗು ಮಹಿಳೆಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಕಾಸರಗೋಡು ಕ್ರೈಂಬ್ರಾಂಚ್‌ ಇನ್ಸ್‌ಪೆಕ್ಟರ್‌ ಆರ್‌.ಶಿವಶಂಕರ್‌ನನ್ನು ಶಿಸ್ತು ಕ್ರಮದಂತೆ ಪೊಲೀಸ್‌ ಸೇವೆಯಿಂದ ವಜಾಗೊಳಿಸಲಾಗಿದೆ.

Advertisement

ಕೇರಳ ಪೊಲೀಸ್‌ ಕಾನೂನಿನ 86(3) ಸೆಕ್ಷನ್‌ ಪ್ರಕಾರ ರಾಜ್ಯ ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ) ಅನಿಲ್‌ಕಾಂತ್‌ ಅವರು ಶಿವಶಂಕರ್‌ ವಿರುದ್ಧ ಶಿಕ್ಷಾ ಕ್ರಮ ಕೈಗೊಂಡಿದ್ದಾರೆ. ಈ ಹಿಂದೆ ಹಲವು ಬಾರಿ ಶಿಸ್ತು ಕ್ರಮಗಳಿಗೆ ಒಳಗಾಗಿದ್ದ ಶಿವಶಂಕರನ್‌ ಅನಂತರವೂ ಹಲವು ಕೇಸುಗಳಲ್ಲಿ ಒಳಗೊಂಡು, ಆ ಮೂಲಕ ಅನುಚಿತ ರೀತಿಯ ನಡವಳಿಕೆ ಮುಂದುವರಿಸಿದ್ದನೆಂದೂ ಡಿಜಿಪಿ ಕೈಗೊಂಡ ಶಿಕ್ಷಾ ಕ್ರಮದಲ್ಲಿ ಹೇಳಲಾಗಿದೆ. ಶಿವಶಂಕರನ್‌ರನ್ನು 2006 ರಿಂದ ನಾಲ್ಕು ಬಾರಿ ಪೊಲೀಸ್‌ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಅಲ್ಲದೆ 11 ಬಾರಿ ಇಲಾಖಾ ಮಟ್ಟದ ಕ್ರಮವನ್ನು ಅವರು ಎದುರಿಸಿದ್ದರು. ಅಕ್ರಮ ಸಂಪಾದನೆ, ಮಾನಭಂಗ, ನಿರಪರಾಧಿಗಳನ್ನು ಪ್ರಕರಣಗಳಲ್ಲಿ ಸಿಲುಕಿಸುವಂತೆ ಮಾಡುವುದು, ಅಕ್ರಮವಾಗಿ ನುಗ್ಗುವುದು ಇತ್ಯಾದಿ ಎಸಗಿದ್ದರಿಂದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಈ ಮೇ ತಿಂಗಳಲ್ಲಿ ಪೊಲೀಸ್‌ ಸೇವೆಯಿಂದ ನಿವೃತ್ತಿಯಾಗಲಿರುವಂತೆ ವಜಾ ಮಾಡಲಾಗಿದೆ.
————————————————————————————————————–

ಸಮುದ್ರದಲ್ಲಿ ನಾಪತ್ತೆಯಾದ ಯುವಕನ ಮೃತದೇಹ ಪತ್ತೆ
ಕಾಸರಗೋಡು: ಕೀಯೂರು ಚೆಂಬರಿಕ ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗ ಸಮುದ್ರದಲೆಗೆ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ ಮೂಲತ: ಮಧ್ಯಪ್ರದೇಶ ಮುರಾಣ ಜಿಲ್ಲೆಯ ಕಾಲಬಸಿ ನಿವಾಸಿ ಅಜೆಯ್‌ ಕುಮಾರ್‌ ರಾಥೋಡ್‌(26) ಅವರ ಮೃತ ದೇಹವನ್ನು ಕೀಯೂರು ಸಮುದ್ರ ಪರಿಸರದಲ್ಲಿ ಮೀನು ಕಾರ್ಮಿಕರು ಪತ್ತೆಹಚ್ಚಿದ್ದಾರೆ. ಮೃತದೇಹವನ್ನು ಕಾಸರಗೋಡು ಪೊಲೀಸರು ಜನರಲ್‌ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದಾರೆ.

ಇದೇ ಸಂದರ್ಭದಲ್ಲಿ ರಾಥೋಡ್‌ ಅವರು ಸಾವನ್ನಪ್ಪಿದ ವಿಷಯ ಊರಿನಲ್ಲಿರುವ ಅವರ ಮನೆಯವರಿಗೆ ತಿಳಿಸಲಾಗಿದ್ದು, ಈ ವಿಷಯ ತಿಳಿದು ಅಜೆಯ್‌ ಕುಮಾರ್‌ ರಾಥೋಡ್‌ ಅವರ ದೊಡ್ಡಪ್ಪ ರೋಶನ್‌ ಲಾಲ್‌ ರಾಥೋಡ್‌(78) ದು:ಖ ತಾಳಲಾರದೆ ಹೃದಯಾಘಾತದಿಂದ ಸಾವಿಗೀಡಾದರು. ಕಳೆದ ಹತ್ತು ವರ್ಷಗಳಿಂದ ಚೆಂಬರಿಕದ ಕ್ವಾರ್ಟರ್ಸ್‌ನಲ್ಲಿ ವಾಸ್ತವ್ಯ ಹೂಡಿ ಮಾರ್ಬಲ್‌ ಕಾರ್ಮಿಕನಾಗಿ ದುಡಿಯುತ್ತಿದ್ದರು.

————————————————————————————————————–
ನಿಗೂಢವಾಗಿ ಮಹಿಳೆ ನಾಪತ್ತೆ
ಮುಳ್ಳೇರಿಯ: ಉತ್ಸವದಲ್ಲಿ ಭಾಗವಹಿಸಲು ತಾಯಿ ಮನೆಗೆ ಬಂದಿದ್ದ ಮಲ್ಲ ಬಳಿಯ ಅಮ್ಮಂಗೋಡಿನ ಅನುಶ್ರೀ(25) ನಾಪತ್ತೆಯಾಗಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ನೀಲೇಶ್ವರ ನಿವಾಸಿಯೊಂದಿಗೆ ಅನುಶ್ರೀ ಅವರ ವಿವಾಹ ಜನವರಿ 22 ರಂದು ನಡೆದಿತ್ತು. ಮಲ್ಲ ಕ್ಷೇತ್ರದ ವಾರ್ಷಿಕ ಜಾತ್ರೆಯಲ್ಲಿ ಭಾಗವಹಿಸಲೆಂದು ಅನುಶ್ರೀ ತವರು ಮನೆಗೆ ಬಂದಿದ್ದು, ಮಾ.10 ರಂದು ಬೆಳಗ್ಗೆ ಕಾಸರಗೋಡಿನ ಅಂಗಡಿಯಿಂದ ಪುಸ್ತಕ ಖರೀದಿಸಲು ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿದ್ದಳು. ಆದರೆ ಸಂಜೆ ವರೆಗೆ ಮನೆಗೆ ಮರಳಿ ಬಂದಿಲ್ಲ. ಇದರಿಂದ ಮನೆಯೊಳಗೆ ನಡೆಸಿದ ತಪಾಸಣೆ ಸಂದರ್ಭದಲ್ಲಿ ಆಕೆಯ ಮೊಬೈಲ್‌ ಫೋನ್‌ ಪತ್ತೆಯಾಯಿತು. ಕೂಡಲೇ ವಿಷಯವನ್ನು ಪೊಲೀಸರಿಗೆ ತಿಳಿಸಲಾಯಿತು. ಪೊಲೀಸರು ನಡೆಸಿದ ತನಿಖೆಯಲ್ಲಿ ಅನುಶ್ರೀ ಕಾಸರಗೋಡು ರೈಲು ನಿಲ್ದಾಣದಲ್ಲಿ ಕಂಡು ಬಂದಿರುವುದಾಗಿ ಸೂಚನೆ ಲಭಿಸಿದೆ. ರೈಲು ನಿಲ್ದಾಣದಲ್ಲಿ ಫೋನ್‌ನಲ್ಲಿ ಮಾತನಾಡುತ್ತಾ ನಿಂತಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪತ್ನಿ ಬೇರೊಂದು ಫೋನ್‌ ಬಳಸುತಿರುವ ಬಗ್ಗೆ ಶಂಕಿಸಲಾಗಿದೆ ಎಂದು ಪತಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

————————————————————————————————————–
ಕಾರು ಢಿಕ್ಕಿ ಹೊಡೆಸಿ ಬೈಕ್‌ಗೆ ಹಾನಿ : ಇಬ್ಬರ ಬಂಧನ
ಕಾಸರಗೋಡು: ಕೂಡ್ಲು ಪಾರೆಕಟ್ಟೆಯ ನಿವಾಸಿ ಹಾಗು ಎಸ್‌ಟಿಯು ಕಾರ್ಮಿಕ ಸಂಘಟನೆಯ ತಲೆಹೊರೆ ಕಾರ್ಮಿಕ ಅಬೂಬಕ್ಕರ್‌ ಸಿದ್ದಿಕ್‌(26) ಅವರ ಬೈಕ್‌ಗೆ ಕಾರು ಢಿಕ್ಕಿ ಹೊಡೆಸಿ ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿ ಕೂಡ್ಲು ರಾಮದಾಸ ನಗರದ ಅಭಿಷೇಕ್‌(26) ಮತ್ತು ಅಜೆಯ್‌ ಕುಮಾರ್‌ ಶೆಟ್ಟಿ(26)ಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಮಾ.10 ರಂದು ಬುಲ್ಲೆಟ್‌ ಬೈಕ್‌ನಲ್ಲಿ ಹೋಗುತ್ತಿದ್ದಾಗ ಹಳೆ ಬಸ್‌ ನಿಲ್ದಾಣ ಪರಿಸರದಲ್ಲಿ ಕಾರು ಢಿಕ್ಕಿ ಹೊಡೆಸಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಕಾರು ಢಿಕ್ಕಿ ಹೊಡೆದುದರಿಂದ ಬೈಕ್‌ಗೆ ಹಾನಿಯಾಗಿದ್ದು, ಸುಮಾರು 50 ಸಾವಿರ ರೂ. ನಷ್ಟ ವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

————————————————————————————————————–
ಗಾಂಜಾ ಬೀಡಿ ಸೇವನೆ : ವಾರೆಂಟ್‌ ಆರೋಪಿ ಬಂಧನ
ಕುಂಬಳೆ: ಗಾಂಜಾ ಬೀಡಿ ಸೇದಿದ ಪ್ರಕರಣಕ್ಕೆ ಸಂಬಂಧಿಸಿ ಬೇಕೂರು ಸಫ ನಗರದ ಅಬೂಬಕ್ಕರ್‌ ಸಿದ್ದಿಕ್‌(34)ನನ್ನು ಪೊಲೀಸರು ಬಂಧಿಸಿದ್ದಾರೆ. 2022 ಮಾರ್ಚ್‌ ತಿಂಗಳಲ್ಲಿ ಈತನನ್ನು ಬಂಧಿಸಲಾಗಿತ್ತು. ಆ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ. ಈತ ನ್ಯಾಯಾಲಯದಲ್ಲಿ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಸರಗೋಡು ಜೆಎಫ್‌ಸಿಎಂ(ದ್ವಿತೀಯ) ವಾರಂಟ್‌ ಹೊರಡಿಸಿತ್ತು.

————————————————————————————————————–
ಪಾನ್‌ ಮಸಾಲೆ ಮಾರಾಟ : ಇಬ್ಬರ ಬಂಧನ
ಕುಂಬಳೆ: ಸೀತಾಂಗೋಳಿ ಪೇಟೆಯಲ್ಲಿ ನಿಷೇಧಿತ ಪಾನ್‌ ಮಸಾಲೆ ಮಾರಾಟಗೈದ ಮುಳಿಯಡ್ಕ ನಿವಾಸಿ ರವಿ(40) ಮತ್ತು ಕುದ್ರೆಪ್ಪಾಡಿಯ ಕುಮಾರನ್‌(59)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ರವಿಯಿಂದ 156 ಪ್ಯಾಕೆಟ್‌, ಕುಮಾರನ್‌ನಿಂದ 110 ಪ್ಯಾಕೆಟ್‌ ಪಾನ್‌ ಮಸಾಲೆ ವಶಪಡಿಸಲಾಗಿದೆ.

————————————————————————————————————–
ಮದ್ಯ ಸಹಿತ ಬಂಧನ
ಕಾಸರಗೋಡು: ಮೈಲಾಟಿ ಚರುಗರ ರಾಜೀವ್‌ ಗಾಂಧಿ ಕಾಲನಿಯಿಂದ 43.2 ಲೀಟರ್‌ ಮದ್ಯ ವಶಪಡಿಸಿಕೊಂಡ ಕಾಸರಗೋಡು ಅಬಕಾರಿ ದಳ ಈ ಸಂಬಂಧ ತೆಕ್ಕಿಲ್‌ ಮೈಲಾಟಿ ಹೌಸ್‌ನ ಪ್ರಶಾಂತ್‌ ವಿ.ವಿ.(34)ಯನ್ನು ಬಂಧಿಸಿದೆ.
————————————————————————————————————–
ಮಟ್ಕಾ ದಂಧೆ : ಬಂಧನ
ಕುಂಬಳೆ: ಕುಂಬಳೆ ಪೇಟೆಯಲ್ಲಿ ಮಟ್ಕಾ ದಂಧೆಯಲ್ಲಿ ಏರ್ಪಟ್ಟ ಮಂಗಲ್ಪಾಡಿ ನಿವಾಸಿ ಶ್ರೀಚರಣ್‌ (24)ನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಂದ 900 ರೂ. ವಶಪಡಿಸಿದ್ದಾರೆ.
————————————————————————————————————–

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next