Advertisement
ಕಳೆದ ಕೆಲವು ವರ್ಷಗಳಿಂದೀಚೆಗೆ ವರದಕ್ಷಿಣೆ ತಡೆ ಕಾಯಿದೆಯನ್ನೇ ಕೆಲವು ಮಹಿಳೆಯರು ತಮ್ಮ ಪತಿ ಮತ್ತವರ ಕುಟುಂಬದವರ ವಿರುದ್ಧ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಸಾಗಿದ್ದು ಒಂದಿಷ್ಟು ಆತಂಕಕ್ಕೆ ಕಾರಣವಾಗಿದೆ. ವರದಕ್ಷಿಣೆ ತಡೆ ಕಾಯಿದೆಯನ್ನು ತಮ್ಮ ಗುರಾಣಿಯನ್ನಾಗಿ ಬಳಸಿಕೊಂಡು ಕೆಲವು ಮಹಿಳೆಯರು ಮತ್ತವರ ಕುಟುಂಬ, ತಮ್ಮ ಪತಿ ಮತ್ತವರ ಕುಟುಂಬಕ್ಕೆ ಕಿರುಕುಳ ನೀಡುತ್ತಿರುವ ಘಟನೆಗಳು ಪದೇಪದೆ ವರದಿಯಾಗುತ್ತಿವೆ. ಐದು ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಉತ್ತರಪ್ರದೇಶದ ಟೆಕ್ಕಿಯೊಬ್ಬರು, ಪತ್ನಿ ಮತ್ತಾಕೆಯ ಕುಟುಂಬದವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆಯ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಬಿರುಸುಗೊಂಡಿರುವಂತೆಯೇ ಸುಪ್ರೀಂ ಕೋರ್ಟ್‌ನಿಂದ ಈ ಮಹತ್ವದ ತೀರ್ಪು ಹೊರಬಿದ್ದಿದೆ.
ಅಸಮಂಜಸ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಕಾರ್ಯದಲ್ಲಿ ನಿರತವಾಗಿರುವುದು ತೀರಾ ಕಳವಳಕಾರಿ ಬೆಳವಣಿಗೆಯಾಗಿದೆ. ಹೀಗಾಗಿ ಈ ಕಾನೂನುಗಳಡಿ ದಾಖಲಾಗುವ ಪ್ರತಿಯೊಂದು ಪ್ರಕರಣವನ್ನೂ ತನಿಖಾ ಸಂಸ್ಥೆಗಳು ಮತ್ತು ನ್ಯಾಯಾಲಯಗಳು ಆಮೂಲಾಗ್ರವಾಗಿ ಪರಿಶೀಲಿಸಿ ಅಂತಿಮ ತೀರ್ಮಾನಕ್ಕೆ ಬರಬೇಕು. ವರದಕ್ಷಿಣೆ ಪ್ರಕರಣ ಎಂಬ ಕಾರಣಕ್ಕಾಗಿ ಏಕಾಏಕಿಯಾಗಿ ಆರೋಪಿತರನ್ನು ದೋಷಿಗಳನ್ನಾಗಿ ಪರಿಗಣಿಸಬಾರದು. ಇಂತಹ ಪ್ರಕರಣಗಳ ವಿಚಾರಣೆ ವೇಳೆ ಅತ್ಯಂತ ಸೂಕ್ಷ್ಮವಾಗಿ ಮತ್ತು ವಿವೇಚನೆಯಿಂದ ವಿಚಾರಣೆ ನಡೆಸಿ, ತೀರ್ಪು ನೀಡಬೇಕು ಎಂದು ನೇರ ಮಾತುಗಳಲ್ಲಿ ಹೇಳುವ ಮೂಲಕ ನ್ಯಾಯಪೀಠ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸುವುದರ ಜತೆಯಲ್ಲಿ ಕಾನೂನು ಜಾರಿ ಸಂಸ್ಥೆಗಳು ಮತ್ತು ನ್ಯಾಯಾಲಯಗಳಿಗೂ ಕಿವಿಮಾತುಗಳನ್ನು ಹೇಳಿದೆ. ಸುಪ್ರೀಂ ಕೋರ್ಟ್ ವರದಕ್ಷಿಣೆ ತಡೆ ಕಾನೂನಿನ ರದ್ದತಿ ಅಥವಾ ಅದನ್ನು ಒಂದಿಷ್ಟು ಸಡಿಲಗೊಳಿಸುವ ಯಾವುದೇ ಪ್ರಸ್ತಾವವನ್ನು ಮಾಡಿಲ್ಲ. ಈ ಕಾನೂನಿನ ಪ್ರಸ್ತುತತೆಯನ್ನು ಎತ್ತಿಹಿಡಿಯುತ್ತಲೇ ಅದರ ದುರ್ಬಳಕೆ ಮತ್ತು ಅದನ್ನು ಹೇಗೆ ತಡೆಯಬಹುದು ಎಂಬುದರತ್ತ ಬೆಳಕು ಚೆಲ್ಲಿದೆ. ಇತ್ತ ದೇಶದ ಎಲ್ಲ ಕಾನೂನು ಜಾರಿ ಸಂಸ್ಥೆಗಳು ಮತ್ತು ನ್ಯಾಯಾಲಯಗಳು ಲಕ್ಷ್ಯ ಹರಿಸಬೇಕು.