Advertisement

ಅಧಿಕಾರಿಗಳ ನಿಂದಿಸಿದರೆ ಸಹಿಸಲ್ಲ

09:01 PM Sep 18, 2022 | Team Udayavani |

ಹೊನ್ನಾಳಿ: ತಹಶೀಲ್ದಾರ್‌ಗೆ ನಿಂದಿಸಿರುವುದು ಸತ್ಯವೆಂದು ಮಾಜಿ ಶಾಸಕರು ಮಾಧ್ಯಮಗಳ ಮುಂದೆ ಒಪ್ಪಿಕೊಳ್ಳುವ ಮೂಲಕ ಮತ್ತೆ ಉದ್ಧಟತನ ತೋರಿದ್ದಾರೆ. ತಕ್ಷಣ ಅವರು ರಾಜಕೀಯ ನಿವೃತ್ತಿ ಹೊಂದಬೇಕು. ಒಂದು ವೇಳೆ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಮನೆ ಪರಿಹಾರ ಕೊಡಿಸಿದ್ದೇನೆ ಎಂದು ಸಾಬೀತುಪಡಿಸಿದರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸವಾಲೆಸೆದರು.

Advertisement

ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷಪಾತ ಮಾಡದೆ ಎಲ್ಲರಿಗೂ ಮನೆ ಹಾನಿ ಪರಿಹಾರ ಕೊಡಿಸುವ ಕೆಲಸ ಮಾಡುತ್ತಿದ್ದೇನೆ. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ಮನೆ ಹಾನಿ ಪರಿಹಾರ ತೆಗೆದುಕೊಂಡವರು ಶೇ. 70ರಷ್ಟು ಕಾಂಗ್ರೆಸ್‌ನವರೇ ಆಗಿದ್ದಾರೆ ಎಂದರು.

ನನ್ನ ಎದುರಿನಲ್ಲಿಯೇ ತಹಶೀಲ್ದಾರ್‌ ಕಚೇರಿಯಲ್ಲೇ ಮಾಜಿ ಶಾಸಕರು ತಹಶೀಲ್ದಾರರಿಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಅವರಿಗೆ ನಾಚಿಕೆ ಆಗಬೇಕು. ತುಂಬು ಗರ್ಭಿಣಿಯಾಗಿರುವ ತಹಶೀಲ್ದಾರರಿಗೆ ಮಾಜಿ ಶಾಸಕರು ಅವಾಚ್ಯ ಶಬ್ದ ಬಳಸಿದ್ದಾರೆ. ಇದಕ್ಕೆ ಅವಳಿ ತಾಲೂಕಿನ ಜನರು ಅವರಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಗುಡುಗಿದರು.

ಮಾಜಿ ಶಾಸಕರು ಅಧಿ ಕಾರಿಗಳಿಗೆ ಏಕವಚನದಲ್ಲಿ ಮಾತನಾಡುವುದನ್ನು ಬಿಡಬೇಕು ಎಂದು ತಾಕೀತು ಮಾಡಿದ ರೇಣುಕಾಚಾರ್ಯ, ಮಾಜಿ ಶಾಸಕರು ಅ ಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಜನರಿಗೆ ಪರಿಹಾರ ಸಿಗದೇ ಇದ್ದರೆ ಅದಕ್ಕೆ ಮಾಜಿ ಶಾಸಕರೇ ನೇರ ಕಾರಣ ಎಂದರು.

ಎರಡು ದಿನಗಳ ಹಿಂದೆ ತಹಶೀಲ್ದಾರ್‌ಗೆ ಬೈದಿಲ್ಲ, ಇಂಜಿನಿಯರ್‌ ಅವರಿಗೆ ಬೈದಿದ್ದು ಎಂದು ಹೇಳಿಕೆ ನೀಡಿದ್ದ ಮಾಜಿ ಶಾಸಕರು ಈಗ ಯೂ ಟರ್ನ್ ಹೊಡೆದಿದ್ದಾರೆ. ತಹಶೀಲ್ದಾರ್‌ಗೆ ಬೈದಿದ್ದು ಸತ್ಯ ಎಂದು ಮಾಧ್ಯಮಗಳ ಮುಂದೆ ಹೇಳುತ್ತಿದ್ದು, ಅವರದ್ದು ಎಲುಬಿಲ್ಲದ ನಾಲಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಅವಳಿ ತಾಲೂಕಿಗೆ ಮಾಜಿ ಶಾಸಕರ ಕೊಡುಗೆ ಶೂನ್ಯ. ಒಂದು ಬಾರಿ ಮಾಜಿ ಶಾಸಕ ಬಸವನಗೌಡ ಅವರ ಅನುಕಂಪದ ಆಧಾರದ ಮೇಲೆ ಗೆದ್ದಿದ್ದ ಅವರು, ಮತ್ತೂಮ್ಮೆ ಸಿದ್ದರಾಮಯ್ಯನವರ ಅಲೆಯಲ್ಲಿ ಗೆದ್ದಿದ್ದರು. ಈ ಬಾರಿ ಸೋಲುತ್ತೇನೆಂಬ ಹತಾಶ ಮನೋಭಾವದಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಕುಟುಕಿದರು. ಮನೆ ಹಾನಿ ಬಗ್ಗೆ ಅಪ್‌ಲೋಡ್‌ ಮಾಡಲು ಕಳೆದ ತಿಂಗಳ 30 ಕೊನೆಯ ದಿನಾಂಕವಾಗಿತ್ತು. ಅದನ್ನು ಸೆ. 15ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಅವಳಿ ತಾಲೂಕಿನ ಜನರಿಗೆ ತೊಂದರೆಯಾಗುತ್ತದೆ ಎಂದು ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ ಮತ್ತೆ ಅದನ್ನು ವಿಸ್ತರಿಸಿದ್ದೇನೆ. ಅವಳಿ ತಾಲೂಕಿನಲ್ಲಿ ಇನ್ನೂ 700ರಿಂದ 800 ಅರ್ಜಿ ಬಾಕಿ ಇದ್ದು, ಅವುಗಳಿಗೂ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ. ಯಾರೂ ಕೂಡ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next